ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಹಿಳಾ ತಂಡಕ್ಕೆ ಸ್ಪೋಟಕ ವಿದೇಶಿ ಆಲ್ರೌಂಡರ್ ಎಂಟ್ರಿ ಕೊಟ್ಟಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ 2025 ಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ಸದಸ್ಯರ ಬಳಗವನ್ನು ರೂಪಿಸಿಕೊಂಡಿದೆ. ಈ ಬಾರಿ ಆರ್ಸಿಬಿ ತಂಡಕ್ಕೆ ಒಟ್ಟು 6 ಹೊಸ ಆಟಗಾರ್ತಿಯರು ಎಂಟ್ರಿ ಕೊಟ್ಟಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3 ಆರಂಭಕ್ಕೂ ಮುನ್ನವೇ RCB ತಂಡದ ಸ್ಟಾರ್ ಆಟಗಾರ್ತಿ ಸೋಫಿ ಮೊಲಿನಿಯಕ್ಸ್ ಹೊರಬಿದ್ದಿದ್ದಾರೆ. ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮೊಲಿನಿಯಕ್ಸ್ ಇಡೀ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಆರ್ಸಿಬಿ ಬದಲಿ ಆಟಗಾರ್ತಿಯನ್ನು ಆಯ್ಕೆ ಮಾಡಿಕೊಂಡಿದೆ.
ಅದರಂತೆ ಇದೀಗ ಸೋಫಿ ಮೊಲಿನಿಯಕ್ಸ್ ಸ್ಥಾನದಲ್ಲಿ ಆರ್ಸಿಬಿ ತಂಡಕ್ಕೆ ಇಂಗ್ಲೆಂಡ್ ಆಟಗಾರ್ತಿ ಚಾರ್ಲಿ ಡೀನ್ ಎಂಟ್ರಿ ಕೊಟ್ಟಿದ್ದಾರೆ. 24 ವರ್ಷದ ಚಾರ್ಲಿ ಡೀನ್ ಈ ಹಿಂದೆ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಂಗ್ಲೆಂಡ್ ಆಟಗಾರ್ತಿಯನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
ಇದೀಗ ಸೋಫಿ ಮೊಲಿನಿಯಕ್ಸ್ ಹೊರಬಿದ್ದ ಬೆನ್ನಲ್ಲೇ ಆರ್ಸಿಬಿ, ಇಂಗ್ಲೆಂಡ್ ತಂಡದ ಬೌಲಿಂಗ್ ಆಲ್ರೌಂಡರ್ನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಇಂಗ್ಲೆಂಡ್ ಹಾಗೂ ಲಂಡನ್ ಸ್ಪಿರಿಟ್ ತಂಡಗಳ ಪರ ಕಣಕ್ಕಿಳಿದಿರುವ ಚಾರ್ಲಿ ಡೀನ್ಗೆ ಇದು ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಆಗಿದೆ.