ಮಧುಮೇಹ ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಆವರಿಸಿಬಿಟ್ಟಿದೆ. ಇತ್ತೀಚಿನ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ, ಮಧುಮೇಹ ರೋಗವು ಅನೇಕ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಇದು ವಯಸ್ಸನ್ನು ಲೆಕ್ಕಿಸದೆ ಚಿಕ್ಕ ಮಕ್ಕಳಿಂದ ವಯಸ್ಕರ ವರೆಗೆ ಎಲ್ಲರನ್ನೂ ಕಾಡುತ್ತಿದೆ.
ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಅದನ್ನು ನಿಯಂತ್ರಣದಲ್ಲಿಡಲು ಅನೇಕ ಮಾರ್ಗಗಳಿವೆ. ಇದನ್ನು ಸಮಯೋಚಿತವಾಗಿ ಗುರುತಿಸಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಅದು ಇತರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಕ್ಕರೆ ಕಾಯಿಲೆ ಇರುವವರು ತಾವು ಸೇವನೆ ಮಾಡುವ ಆಹಾರದ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ.
ಇನ್ನೂ ಮಧುಮೇಹಿಗಳು ಸಕ್ಕರೆ ತಿನ್ನಬಾರದು ಎನ್ನಲಾಗುತ್ತದೆ. ಸಕ್ಕರೆ ತಿಂದರೆ ಮಧುಮೇಹ ಹೆಚ್ಚಾಗುತ್ತದೆ ಎನ್ನುತ್ತಾರೆ. ಹಾಗಾಗಿ ಕೆಲವರು ಮಧುಮೇಹ ಬರಬಾರದು ಎನ್ನುವ ಕಾರಣಕ್ಕೆ ಮುಂಜಾಗ್ರತೆಯ ಕ್ರಮವಾಗಿ ಸಕ್ಕರೆ ಸೇವನೆಯನ್ನು ನಿಲ್ಲಿಸಿಬಿಟ್ಟಿದ್ದಾರೆ. ಆದ್ರೆ ನಿಮಗೆ ಗೊತ್ತಾ ಬರೀ ಸಕ್ಕರೆ ಸೇವಿಸೋದ್ರಿಂದ ಮಾತ್ರವಲ್ಲ, ಈ ಕೆಲವು ಆಹಾರಗಳನ್ನು ತಿನ್ನೋದ್ರಿಂದಲೂ ಮಧುಮೇಹ ಬರುತ್ತೆ.
ನೀವು ಎಷ್ಟು ಡಯೆಟ್‌ನ್ನು ಪಾಲಿಸುತ್ತೀರೋ, ಸಿಹಿ ಪದಾರ್ಥಗಳನ್ನು ದೂರವಿಟ್ಟೀರೋ ಅಷ್ಟು ನಿಮ್ಮ ಸಕ್ಕರೆ ಮಟ್ಟವು ಕಂಟ್ರೋಲ್‌ಗೆ ಬರುತ್ತದೆ. ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಉತ್ತಮ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ಧತಿಯಿಂದ ಮಾತ್ರ ಇದನ್ನು ನಿಯಂತ್ರಿಸಬಹುದು. ಮಧುಮೇಹ ರೋಗಿಗಳು ಸಾಮಾನ್ಯವಾಗಿ ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ನಿಷೇಧಿಸುತ್ತಾರೆ. ಆದರೆ ಅದರ ಜೊತೆ ಈ ಕೆಲವು ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು.
ಬಿಳಿ ಅನ್ನ ತಿನ್ನಲು ಸಿಹಿಯಾಗಿಲ್ಲದಿದ್ದರೂ ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು. ನೀವು ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಅನ್ನವನ್ನು ಸೇವಿಸುತ್ತಿದ್ದರೆ ಅದನ್ನು ತಪ್ಪಿಸಲು ಪ್ರಯತ್ನಿಸಿ. ಬಿಳಿ ಅನ್ನದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಇರುವುದರಿಂದ ಇವು ಮಧುಮೇಹಿಗಳಿಗೆ ಒಳ್ಳೆಯದಲ್ಲ.
ಮೈದಾ ಸೇವನೆ:-
ಸಂಸ್ಕರಿಸಿದ ಹಿಟ್ಟು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಮೈದಾದಿಂದ ತಯಾರಿಸಲಾಗಿರುವ ಬಿಳಿ ಬ್ರೆಡ್, ಬಿಸ್ಕತ್ತುಗಳು, ಪಾಸ್ತಾ ಅಥವಾ ಸಮೋಸಾಗಳು ಮಧುಮೇಹ ರೋಗಿಗಳ ಸಮಸ್ಯೆಗಳನ್ನು ಹೆಚ್ಚಿಸಬಹುದು. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಕಷ್ಟಕರವಾಗಿರುತ್ತದೆ. ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಿದ ಆಹಾರಗಳಲ್ಲಿಯೂ ಪೋಷಕಾಂಶಗಳ ಕೊರತೆ ಇರುತ್ತದೆ.
ಎಣ್ಣೆಯಲ್ಲಿ ಕರಿದ ಆಹಾರಗಳು:
ಹೆಚ್ಚು ಕರಿದ ಆಹಾರವೂ ಅನಾರೋಗ್ಯಕರವಾಗುತ್ತದೆ. ವಿಶೇಷವಾಗಿ ಮಧುಮೇಹ ರೋಗಿಗಳು ಇದರಿಂದ ದೂರವಿರಬೇಕು. ಮಧುಮೇಹಿಗಳಿಗೆ ಹೆಚ್ಚು ಕರಿದ ಆಹಾರ ಸೇವನೆ ಒಳ್ಳೆಯದಲ್ಲ. ಇದರಿಂದಾಗಿ ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು, ಕೊಲೆಸ್ಟ್ರಾಲ್ ಮಟ್ಟವೂ ಹೆಚ್ಚಾಗಬಹುದು ಮತ್ತು ಮಲಬದ್ಧತೆ ಕೂಡ ಅವರನ್ನು ಕಾಡಬಹುದು.
ಆಲೂಗಡ್ಡೆ ಸೇವನೆ:
ಮಧುಮೇಹ ರೋಗಿಗಳಿಗೆ ಹೆಚ್ಚು ಹಸಿರು ತರಕಾರಿಗಳನ್ನು ತಿನ್ನಲು ಸೂಚಿಸಲಾಗುತ್ತದೆ ಆದರೆ ನೀವು ಹೆಚ್ಚು ಆಲೂಗಡ್ಡೆ ತಿನ್ನುತ್ತಿದ್ದರೆ ಜಾಗರೂಕರಾಗಿರಿ. ಏಕೆಂದರೆ ಇದರ ಅತಿಯಾದ ಪ್ರಮಾಣವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪ್ರಚೋದಿಸಬಹುದು. ಇದರಲ್ಲಿ ಬಹಳಷ್ಟು ಪಿಷ್ಟವಿದೆ, ಆದ್ದರಿಂದ ಇದು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕದ ತರಕಾರಿಯಾಗಿದ್ದು, ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ.
ಪ್ಯಾಕೇಜ್‌ನಲ್ಲಿರುವ ಹಣ್ಣುಗಳು:
ಮಧುಮೇಹ ರೋಗಿಗಳು ಕೆಲವೇ ಹಣ್ಣುಗಳನ್ನು ತಿನ್ನಲು ಸೂಚಿಸಲಾಗುತ್ತದೆ. ಅವರು ಡಬ್ಬಗಳಲ್ಲಿ ಅಥವಾ ಪ್ಯಾಕಿಂಗ್‌ನಲ್ಲಿ ಬರುವ ಹಣ್ಣುಗಳನ್ನು ಸೇವಿಸಬಾರದು. ಏಕೆಂದರೆ ಅವುಗಳಿಗೆ ರುಚಿಗಾಗಿ ಹಲವು ರೀತಿಯ ಬಣ್ಣಗಳು, ಸಂರಕ್ಷಕಗಳು ಮತ್ತು ಸಕ್ಕರೆಯನ್ನು ಸೇರಿಸಲಾಗುತ್ತದೆ. ಇದು ಮಧುಮೇಹ ರೋಗಿಗಳ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ ವೈದ್ಯರು ಸೂಚಿಸಿರುವ ಹಣ್ಣುಗಳನ್ನು ಮಾತ್ರ ತಿನ್ನಬೇಕು.