ಮಂಡ್ಯ:- ಗ್ರಾಮೀಣ ಪ್ರದೇಶದ ಮುಗ್ಧರು, ಅಮಾಯಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ನಕಲಿ ಪೋಸ್ಟ್ ಮಾಸ್ಟರ್ ಎಸ್ಕೇಪ್ ಆಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದ ಅಂಚೆ ಕಚೇರಿಯಲ್ಲಿ ಜರುಗಿದೆ.
ದೊರೆಸ್ವಾಮಿ @ ರಾಜು ಎಂಬಾತ ಗ್ರಾಮದ ಸಾಕಷ್ಟು ಜನರ ಠೇವಣಿ ಹಣ, ಖಾತೆಯಲ್ಲಿದ್ದ ಹಣ, ಪಿಂಚಣಿ, ಗೃಹಲಕ್ಷ್ಮೀ ಹಣವನ್ನೆಲ್ಲ ಲಪಟಾಯಿಸಿ ಊರು ತೊರೆದು ಎಸ್ಕೇಪ್ ಆಗಿದ್ದಾನೆ. ಇವನ ಮೋಸದ ಜಾಲಕ್ಕೆ ಸಿಲುಕಿದ ಹಲವರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.
ಪತಿ ಮರಣದ ನಂತರ ಅನುಕಂಪದ ಆಧಾರದಲ್ಲಿ ಸುಧಾ ಎಂಬ ಮಹಿಳೆ ನೌಕರಿ ಪಡೆದಿದ್ದರು. ತಾಯಿ ಕೆಲಸವನ್ನು ಆರೋಪಿ ರಾಜು ತಾನೇ ABPM ಆಗಿ ಕೆಲಸ ಮಾಡ್ತಿದ್ದ. ತಾನೇ ಖಾಯಂ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಎಂಬಂತೆ ಬಿಂಬಿಸಿಕೊಳ್ತಿದ್ದ. ಇದೇ ರಾಜು ಎಂಬುವನನ್ನು ನಂಬಿ ಅಂಚೆ ಕಚೇರಿಯಲ್ಲಿ ಸಾಕಷ್ಟು ಜನರು ಠೇವಣಿ ಇಡುತ್ತಿದ್ದರು. ಆದರೆ ಈ ಠೇವಣಿ ಇಟ್ಟ ಹಣಕ್ಕೆ ರಶೀದಿ ಆಗಲಿ ಅಥವಾ ಯಾವುದೇ ದಾಖಲೆ ನೀಡದೆ ನಿತ್ಯವೂ ಸಬೂಬು ಹೇಳಿ ಜನರನ್ನು ಕಳಿಸುತ್ತಿದ್ದ.
ಅಲ್ಲದೇ ಒಂದೇ ಬಾರಿ ಮಹಿಳೆಯೊಬ್ಬರ 4 ಲಕ್ಷ ಹಣ ಪೀಕಿ ವಂಚನೆ ಎಸಗಿದ್ದ. ಕೊಟ್ಟ ಹಣಕ್ಕೆ ರಶೀದಿ ಕೊಡದೆ ಸತಾಯಿಸುತ್ತಿದ್ದಾಗ ಈತನ ವಂಚನೆ ಬೆಳಕಿಗೆ ಬಂದಿದೆ. ಹಣಕ್ಕಾಗಿ ಒತ್ತಡ ಹೆಚ್ಚಾಗುತ್ತಿದ್ದಂತೆ ರಾಜು ಊರು ಬಿಟ್ಟು ಪರಾರಿಯಾಗಿದ್ದಾನೆ. ಇನ್ನೂ 4 ಲಕ್ಷ ವಂಚನೆ ಬಯಲಾಗ್ತಿದ್ದಂತೆ ಒಂದೊಂದೇ ಪ್ರಕರಣ ಬಯಲಿಗೆ ಬಂದಿದೆ. ಇನ್ನೂ ಮೋಸಕ್ಕೆ ಒಳಗಾದವರು ರಾಜು ವಂಚನೆ ವಿರುದ್ಧ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎಂದಿಲ್ಲ. ಹೀಗಾಗಿ ಅಂಚೆ ಇಲಾಖೆ ವಂಚಕರ ವಿರುದ್ಧ ಹಣ ಕಳೆದುಕೊಂಡು ಕಂಗಾಲಾಗಿರುವ ಜನರು ಆಕ್ರೋಶ ಹೊರ ಹಾಕಿದ್ದಾರೆ.