ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆ ನಡೆದಿದೆ. ಈ ಹಿಂದೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸುದ್ದಿ ಹರಿದಾಡಿದ್ದು ಇದನ್ನು ಮುಂಬೈ ಪೊಲೀಸರು ಅಲ್ಲಗಳೆದಿದ್ದರು. ಇದೀಗ ಶಂಕಿತ ದಾಳಿಕೋರನನ್ನ ಛತ್ತಿಸ್‌ಗಢದ ದುರ್ಗ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಶಂಕಿತ ಆರೋಪಿಯನ್ನು ಆಕಾಶ್ ಕೈಲಾಶ್ ಕನೋಜಿಯಾ (31) ಎಂದು ಗುರುತಿಸಲಾಗಿದೆ. ಮುಂಬೈ-ಹೌರಾ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಮುಂಬೈ ಪೊಲೀಸರಿಂದ ಮಾಹಿತಿ ಪಡೆದಿದ್ದ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ಆರೋಪಿಯನ್ನ ದುರ್ಗ್ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆತನ ಗುರುತು ಖಚಿತಪಡಿಸಿಕೊಳ್ಳಲು ಮುಂಬೈ ಪೊಲೀಸರು ಒಂದೆರಡು ಗಂಟೆಗಳಲ್ಲೇ ಛತ್ತಿಸ್‌ಗಢದ ದುರ್ಗ್‌ಗೆ ಭೇಟಿ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ದುರ್ಗ್ ರೈಲು ನಿಲ್ದಾಣ ತಲುಪಿದ್ದ ಶಂಕಿತ ಜನರಲ್ ಕಂಪಾರ್ಟ್ಮೆಂಟ್‌ನಲ್ಲಿ ಕುಳಿತಿದ್ದ. ಆತನ ಬಳಿ ಯಾವುದೇ ಕಿಟ್ ಇರಲಿಲ್ಲ. ಆಕಾಶ್ ಕೈಲಾಶ್‌ನನ್ನ ನೋಡಿದ ಆರ್‌ಪಿಎಫ್ ಅನುಮಾನಗೊಂಡು ಕೆಳಗಿಳಿಸಿ, ವಿಚಾರಿಸಿದ್ದಾರೆ. ಮೊದಲು ನಾಗ್ಪುರಕ್ಕೆ ಹೋಗುವುದಾಗಿ ಹೇಳಿದ್ದ ಶಂಕಿತ, ವಿಚಾರಣೆ ವೇಳೆ ಬಿಲಾಸ್‌ಪುರಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾನೆ ಇದರಿಂದ ಅಧಿಕಾರಿಗಳ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಈ ಬಗ್ಗೆ ಮುಂಬೈ ಪೊಲೀಸರಿಂದ ಮೊದಲೇ ಶಂಕಿತನ ಫೋಟೋ, ಪ್ರಯಾಣಿಸುತ್ತಿದ್ದ ರೈಲು ಸಂಖ್ಯೆ ಹಾಗೂ ಖಚಿತ ಸ್ಥಳದ ಮಾಹಿತಿ ಪಡೆದಿದ್ದ ಆರ್‌ಪಿಎಫ್ ತಂಡ ಆತನನ್ನ ಬಂಧಿಸಿದೆ.