ಚಿತ್ರದುರ್ಗ:- ಉದ್ಯೋಗ ಖಾತ್ರಿ ಯೋಜನೆಯಡಿ ನಡೆಸಲಾದ ಕಳಪೆ ಕಾಮಗಾರಿ ಪ್ರಶ್ನಿಸಿ ದೂರು ಕೊಟ್ಟ ವ್ಯಕ್ತಿಗೆ ದುಷ್ಕರ್ಮಿಗಳ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಮಸಣೇಹಳ್ಳಿ ಗೊಲ್ಲರಹಟ್ಟಿಯಲ್ಲಿ ಜರುಗಿದೆ.
NREGಯಲ್ಲಿ ಶಾಲಾ ಕಟ್ಟಡ ರಿಪೇರಿ ಮಾಡಿಸದೆ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಅಲ್ಲದೇ ಜನರನ್ನ ಬಳಸದೆ JCB ಬಳಸಿ ಕೆಲಸ ಮಾಡಿದ್ದಾರೆ. ಹೀಗಾಗಿ ಹಣ ತಡೆಹಿಡಿದು ತನಿಖೆಗೆ ಒಳಪಡಿಸುವಂತೆ ಅತ್ತಿಮಗ್ಗೆ ಗ್ರಾ.ಪಂಚಾಯಿತಿಯ PDO, EO ಗೆ ಮಸಣೇಹಳ್ಳಿ ಗೊಲ್ಲರಹಟ್ಟಿ ನಿವಾಸಿ ಮಂಜುನಾಥ್ ಎನ್ನುವ ವ್ಯಕ್ತಿ ದೂರು ನೀಡಿದ್ದರು.
ದೂರುಕೊಟ್ಟ ಮಂಜುನಾಥ್ ಅವರು, ತಾಲ್ಲೂಕಿನ ಮತ್ತೋಡು ಗ್ರಾಮದಲ್ಲಿ ಬೇಕರಿ ನಡೆಸುತ್ತಿದ್ದರು ಎನ್ನಲಾಗಿದೆ. ದೂರುಕೊಟ್ಟ ಹಿನ್ನೆಲೆ NREG ಕೆಲಸ ಮಾಡಿದ್ದವರಿಂದಲೇ ಈ ಹಲ್ಲೆ ಮಾಡಲಾಗಿದೆ. ಮನಸೋ ಇಚ್ಚೆ ದಬ್ಬಳ ಚುಚ್ಚಿ ಹಲ್ಲೆ ಮಾಡಲಾಗಿದ್ದು, ಗಾಯಾಳು ಮಂಜುನಾಥ್ ನನ್ನು ಹೊಸದುರ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧ ಹೊಸದುರ್ಗ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.