ರಾಯಚೂರು:- ರಾಯಚೂರಿನ ಸಿಂಧನೂರು ನಗರದ ಹೊರವಲಯದಲ್ಲಿ ತಡರಾತ್ರಿ ಅಪಘಾತ ಸಂಭವಿಸಿದೆ. ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಾಹನ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂವರು ವಿದ್ಯಾರ್ಥಿಗಳು, ಓರ್ವ ಚಾಲಕ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ. 18 ವರ್ಷದ ಹಯವದನ, 22 ವರ್ಷದ ಸುಜಯೇಂದ್ರ, 20 ವರ್ಷದ ಅಭಿಲಾಷ, ಹಾಗೂ ಚಾಲಕ 20 ವರ್ಷದ ಜಂಸಾಲಿ ಶಿವ ಮೃತ ದುರ್ದೈವಿಗಳು ಎನ್ನಲಾಗಿದೆ.
14 ಮಂದಿ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನವು ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುತ್ತಿತ್ತು. ಈ ವೇಳೆ ಆಕ್ಸಿಲರೇಟರ್ ಕಟ್ ಆಗಿದ್ದರಿಂದ ವಾಹನ ಪಲ್ಟಿ ಹೊಡೆದಿದೆ. ಘಟನೆಗೆ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಸದ್ಯ ಗಾಯಗೊಂಡ 10 ವಿದ್ಯಾರ್ಥಿಗಳನ್ನ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಂಧನೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



