ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸೂರ್ಯ-ಚಂದ್ರರಿರುವವರೆಗೂ ಭೋವಿ ಸಮಾಜವನ್ನು ಎಸ್‌ಸಿ ಮೀಸಲು ಪಟ್ಟಿಯಿಂದ ಕೈಬಿಡದಂತೆ ಕೇಂದ್ರ ಸರ್ಕಾರ ಮತ್ತು ಕೋರ್ಟ್ಗೆ ಕಾನೂನಾತ್ಮಕ ಶಿಫಾರಸ್ಸು ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಪಟ್ಟಣದ ಶ್ರೀ ಜ. ರಂಭಾಪುರಿ ಸಮುಧಾಯಭವನದಲ್ಲಿ ಗುರುವಾರ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ತಾ.ಪಂ, ಪುರಸಭೆ, ಇನ್ನಿತರ ಇಲಾಖೆಗಳು ಹಾಗೂ ಲಕ್ಮೇಶ್ವರ ತಾಲೂಕಾ ಭೋವಿ ವಡ್ಡರ ಸಮಾಜ ಇವುರುಗಳ ಸಂಯುಕ್ತಾಶ್ರಯದಲ್ಲಿ ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರರ 852ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಂತ್ರಿ ನರೇಂದ್ರ ಮೋದಿ ಅವರ ಶ್ರೇಷ್ಠ ಭಾರತ ನಿರ್ಮಾಣದ ಚಿಂತನೆಗಳು ಶ್ರೀ ಸಿದ್ಧರಾಮೇಶ್ವರರ ವಚನಗಳ ಸಾರದಲ್ಲಿ ಅಡಗಿವೆ. ಬಸವಣ್ಣನವರ ಕಾಯಕವೇ ಕೈಲಾಸ ಜೀವನ್ಮಂತ್ರವನ್ನು ಸಾರ್ವತ್ರೀಕರಣಗೊಳಿಸುವ ಜತೆಗೆ 4 ಸಾವಿರ ಕೆರೆಗಳನ್ನು, ಕೆರೆಯ ಪಕ್ಕ ದೇವಸ್ಥಾನಗಳನ್ನು ನಿರ್ಮಿಸಿ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಶಿವಶರಣರಲ್ಲಿಯೇ ಶ್ರೇಷ್ಠರಾದ ಶ್ರೀ ಅಲ್ಲಮಪ್ರಭುಗಳು, ಬಸವಣ್ಣನವರ ಮೆಚ್ಚುಗೆಗೆ ಪಾತ್ರರಾಗಿದ್ದ ಶ್ರೀ ಸಿದ್ದರಾಮೇಶ್ವರರು ತಮ್ಮ ಅನುಭಾವದ ವಚನಗಳ ಮೂಲಕ ಕಾಯಕದ ಮಹತ್ವ ಸಾರಿ, ಕಾಯಕನಿಷ್ಠ ಸಮಾಜ ನಿರ್ಮಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಸಮಾಜದ ಶ್ರೇಯೋಭಿವೃದ್ಧಿಗಾಗಿ ನನ್ನ ಅಧಿಕಾರಾವಧಿಯಲ್ಲಿ ಕೈಲಾದಮಟ್ಟಿಗಿನ ಸೇವೆ ಮಾಡಿರುವ ಸಂತೃಪ್ತಿಯಿದ್ದು ಸದಾ ಸಮಾಜದ ಜೊತೆಗಿರುತ್ತೇನೆ ಎಂದರು.
ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಬೋವಿವಡ್ಡರ ಸಂಸ್ಥಾನಮಠದ ಜ.ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ, ಶಿವಯೋಗಿ ಸಿದ್ದರಾಮೇಶ್ವರರು ಕಾಯಕ ಸಿದ್ಧಾಂತದ ಮಹತ್ವ ಸಾರುವದರೊಂದಿಗೆ ಸಮಾಜದಲ್ಲಿನ ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ವಚನಗಳ ಮೂಲಕ ಹೋಗಲಾಡಿಸಿದರು. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯಿರುವ ಕಾಯಕ ಸಮಾಜಕ್ಕೆ ಎಂದೂ ಬಡತನ, ದುಃಖ ಬರುವುದಿಲ್ಲ. ಕಲ್ಲ ಬಂಡೆಗಳನ್ನು ಕಡಿದು ಮನೆ, ಮಠ, ದೇವಸ್ಥಾನ, ಸಮಾಜ ನಿರ್ಮಿಸುವ ಶ್ರೇಷ್ಠವಾದ ಕೆಲಸ ಮಾಡುವ ಭೋವಿ ಸಮಾಜ ಶ್ರೇಷ್ಠ ಸಮಾಜವಾಗಿದೆ. ಸಿದ್ಧರಾಮೇಶ್ವರರ ವಚನಗಳ ಆದರ್ಶ ಚಿಂತನೆ, ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜ ಬಾಂಧವರು ಸಂಘಟಿತರಾಗಬೇಕು. ಕೀಳರಿಮೆ ತೊರೆದು ತಮ್ಮ ವೃತ್ತಿಗೆ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದರು.
ಸಾಹಿತಿ ಎಫ್.ಎಸ್. ಕರಿದುರಗಣ್ಣವ ಉಪನ್ಯಾಸ ನೀಡಿದರು. ಭೋವಿ ವಡ್ಡರ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ರವಿ ಪೂಜಾರ ಪ್ರಾಸ್ತಾವಿಕ ನುಡಿದರು. ಅತಿಥಿಗಳಾಗಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ನಿಗಮದ ಅಧ್ಯಕ್ಷ ರವಿಕುಮಾರ ಬೋವಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ, ಡಾ. ಬಸವರಾಜ ಬಳ್ಳಾರಿ, ರಮೇಶ ಪಾತ್ರೋಟ, ಹುಚ್ಚಪ್ಪ ಸಂದಕದ, ಪುರಸಭೆ ಮಾಜಿ ಅಧ್ಯಕ್ಷೆ ಜಯಕ್ಕ ಕಳ್ಳಿ, ನಿರ್ಮಲಾ ಬರದೂರ, ಹೊನ್ನಪ್ಪ ವಡ್ಡರ, ಅರ್ಜುನ ಹಂಚಿನಮನಿ, ನೀಲಪ್ಪ ಶರಸೂರಿ, ಲೋಕೇಶ ಸುತಾರ, ಬೀಮಣ್ಣ ಯಂಗಾಡಿ, ತಾಲೂಕ ಅಧ್ಯಕ್ಷ ರಾಜು ಕಳ್ಳಿ, ಮಲ್ಲೇಶ ವಡ್ಡರ ಹಾಗೂ ಪದಾಧಿಕಾರಿಗಳು ಸೇರಿದಂತೆ ಭೋವಿ ಸಮಾಜದ ಲಕ್ಮೇಶ್ವರ ಸೇರಿ ವಿವಿಧ ತಾಲೂಕಿನ ಮುಖಂಡರು, ದಾನಿಗಳು ಇದ್ದರು.
ಎಫ್.ಎಚ್. ಮುದಗಲ್ ಸ್ವಾಗತಿಸಿದರು, ಐ.ಎಚ್. ಮುದಗಲ್ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮುಖ್ಯ ಮಾರ್ಗದಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರದ ಮೆರವಣಿಗೆ ನೂರಾರು ಮುತ್ತೆöÊದೆಯರ ಪೂರ್ಣಕುಂಭ, ಚಂಡಿಮೇಳ, ಗೊಂಬೆ ಕುಣಿತದೊಂದಿಗೆ ಅದ್ದೂರಿಯಾಗಿ ನೆರವೇರಿತು.
ದೊಡ್ಡ ರಾಜಕೀಯ ಪಕ್ಷದ ಮುಖಂಡರು ಭೋವಿ, ಲಮಾಣಿ ಸಮಾಜ ಎಸ್‌ಸಿ ಮೀಸಲಾತಿಯಿಂದ ತೆಗೆದುಹಾಕುವಂತೆ ಸುಪ್ರಿಂಕೋರ್ಟ್ ಮೊರೆಹೋಗಿದ್ದರು. ಮೈಸೂರು ಮಹಾರಾಜ ಕಾಲದಲ್ಲಿ, ಸ್ವತಂತ್ರಪೂರ್ವ ಹಾಗೂ ಸಂವಿಧಾನ ರಚನೆ ಪೂರ್ವದಲ್ಲಿಯೇ ಭೋವಿ ಸೇರಿ ಇತರೇ 6 ಸಮಾಜಕ್ಕೆ ಮಿಸಲಾತಿ ಇತ್ತು. ಶ್ರೀಶೈಲ ಮಲ್ಲಿಮಾರ್ಜುನನ ಆಶೀರ್ವಾದ ಪಡೆದ ಅವರು ಬಾಲ್ಯದಲ್ಲಿಯೇ ವಯಸ್ಸಿಗೆ ಮೀರಿ ಜ್ಞಾನ ಹೊಂದಿ ತಮ್ಮ ಜೀವನಾನುಭವದಿಂದ ಜೀವನಕ್ಕೆ ಸ್ಪೂರ್ತಿಯಾಗುವ 63 ಸಾವಿರ ವಚನಗಳನ್ನು ಬರೆದಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.