ವಿಜಯಸಾಕ್ಷಿ ಸುದ್ದಿ, ಧಾರವಾಡ: ಹುಬ್ಬಳ್ಳಿ ಕೇಶ್ವಾಪೂರ ನಿವಾಸಿ ಮತ್ತು ಅಲ್ಲಿಯ ವ್ಯಾಪಾರಿಯಾದ ಪಂಕೇಶ ಜೈನ್ ತನ್ನ ಹೆಂಡತಿ ಮತ್ತು ಇಬ್ಬರೂ ಅಲ್ಪ ವಹಿ ಮಕ್ಕಳೊಂದಿಗೆ ಅಕ್ಟೋಬರ್-2023ರಲ್ಲಿ ದುಬೈಗೆ ಪ್ರವಾಸ ಹೋಗಲು ತೀರ್ಮಾನಿಸಿ ವಿಮಾನಯಾನದ ಟಿಕೆಟ್ ಖರೀದಿಸಿದ್ದರು. ಅದಕ್ಕಾಗಿ ತನ್ನ ಹಾಗೂ ಹೆಂಡತಿಯ ಪಾಸ್‌ಪೋರ್ಟ್ ತಯಾರಿದ್ದವು. ಇಬ್ಬರೂ ಅಲ್ಪ ವಹಿ ಮಕ್ಕಳ ಪಾಸ್‌ಪೋರ್ಟ್ಗಾಗಿ ದೂರುದಾರ ಪಂಕೇಶ ಹುಬ್ಬಳ್ಳಿಯ ಪಾಸ್‌ಪೋರ್ಟ್ ಕಛೇರಿಗೆ ಅರ್ಜಿ ಸಲ್ಲಿಸಿದ್ದರು. ಆಗ ಪರಿಶೀಲನೆಗಾಗಿ ದೂರುದಾರನ ಪಾಸ್‌ಪೋರ್ಟ್ ನ ಸದರಿ ಕಛೇರಿಯವರು ಪಡೆದುಕೊಂಡಿದ್ದರು. ಮಕ್ಕಳ ಪಾಸ್‌ಪೋರ್ಟ್ ತಯಾರಿಸಿ ಕೊಡುವಾಗ ದೂರುದಾರ ಪಂಕೇಶ ಅವರ ಪಾಸ್‌ಪೋರ್ಟ್ ನಲ್ಲಿ ಕ್ಯಾನ್ಸಲೇಷನ್ ಸೀಲ್‌ನ್ನು ಹಾಕಿಕೊಟ್ಟಿದ್ದರು. ಅದನ್ನು ದೂರುದಾರ ಗಮನಿಸಿರಲಿಲ್ಲ.
ನಿಗದಿಯಂತೆ 17/10/2023ರಂದು ದೂರುದಾರ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ದುಬೈಗೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಹೋದರು. ಅಲ್ಲಿ ತಪಾಸಣೆ ಮಾಡುವಾಗ ದೂರುದಾರರ ಪಾಸ್‌ಪೋರ್ಟ್ನಲ್ಲಿ ಕ್ಯಾನ್ಸಲೇಷನ್ ಸೀಲ್ ಹಾಕಿರುವುದು ಕಂಡುಬಂತು. ಆ ಕಾರಣದಿಂದ ದೂರುದಾರನಿಗೆ ವಿಮಾನ ಹತ್ತಲು ಅಲ್ಲಿಯ ಸಿಬ್ಬಂದಿ ಅನುಮತಿಸಲಿಲ್ಲ. ಆಗ ತನ್ನ ಪಾಸ್‌ಪೋರ್ಟ್ನಲ್ಲಿ ತಪ್ಪಾಗಿರುವುದನ್ನು ಗಮನಿಸಿ ತಕ್ಷಣ ಹುಬ್ಬಳ್ಳಿಯಲ್ಲಿರುವ ತನ್ನ ಸಂಬಂಧಿಕರನ್ನು ಸಂಪರ್ಕಿಸಿ ಹುಬ್ಬಳ್ಳಿಯ ಪಾಸ್‌ಪೋರ್ಟ್ ಕಛೇರಿಗೆ ಹೋಗಿ ವಿಷಯ ತಿಳಿಸಿದಾಗ ಅವರು ತಮ್ಮಿಂದ ತಪ್ಪಾಗಿರುವುದಾಗಿ ಪಾಸ್‌ಪೋರ್ಟ್ ಇಲಾಖೆಯವರು ಒಪ್ಪಿಕೊಂಡರು.
ತಕ್ಷಣ ಅವರು ಮುಂಬೈ ಪಾಸ್‌ಪೋರ್ಟ್ ಕಛೇರಿಯವರನ್ನು ಸಂಪರ್ಕಿಸಿ ದೂರುದಾರನ ಪಾಸ್‌ಪೋರ್ಟ್ ಸರಿಪಡಿಸಿದರು. ಅದಕ್ಕಾಗಿ ದೂರುದಾರ ರೂ. 11,000 ಖರ್ಚು ಮಾಡಬೇಕಾಯಿತು. 17/10/2023ರಂದು ನಿಗದಿಯಾಗಿದ್ದ ಅವರ ದುಬೈ ಪ್ರವಾಸ ರದ್ದಾಯಿತು. ಮರುದಿವಸ 18/10/2023ರಂದು ದೂರುದಾರ ತನ್ನ ಹೆಂಡತಿ ಮಕ್ಕಳೊಂದಿಗೆ ದುಬೈ ಪ್ರವಾಸ ಕೈಗೊಂಡರು. ಅದರ ಪರಿಣಾಮವಾಗಿ ಪಾಸ್‌ಪೋರ್ಟ್ ಸರಿಪಡಿಸಲು ರೂ.11,000 ಖರ್ಚಾಗಿದೆ, 17/10/2023ರಂದು ಪ್ರವಾಸ ರದ್ದಾಗಿದ್ದರಿಂದ ಮುಂಬೈ ಹೊಟೇಲ್‌ನಲ್ಲಿ ಉಳಿಯಬೇಕಾಗಿದ್ದರಿಂದ ಖರ್ಚಾಗಿದೆ ಮತ್ತು ದುಬೈನಲ್ಲಿನ ನಿಗದಿಯಾಗಿದ್ದ ಪ್ರವಾಸದ ಅವಧಿಯಲ್ಲಿ ಎರಡು ದಿವಸ ಕಡಿತವಾಗಿರುವುದರಿಂದ ಎದುರುದಾರ ಪಾಸ್‌ಪೋರ್ಟ್ ಕಛೇರಿಯವರಿಂದ ತನಗೆ ಸೇವಾ ನ್ಯೂನತೆ ಆಗಿದೆ ಎಂದು ಹೇಳಿ ಎಲ್ಲರ ಪರವಾಗಿ ದೂರುದಾರ ರೂ.25 ಲಕ್ಷ ಪರಿಹಾರ ಕೊಡುವಂತೆ ಕೋರಿ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 18/04/2024ರಂದು ದೂರು ಸಲ್ಲಿಸಿದ್ದರು.
ಪಾಸ್‌ಪೋರ್ಟ್ ನೀಡುವ ಕೆಲಸದಲ್ಲಿ ಏನಾದರೂ ನ್ಯೂನತೆ ಆದರೆ ಅದರ ಬಗ್ಗೆ ಪಾಸ್‌ಪೋರ್ಟ್ ಕಾಯ್ದೆ ಕಲಂ-16ರಂತೆ ಇಲಾಖೆಯ ಅಧಿಕಾರಿ ವರ್ಗದವರ ಮೇಲೆ ಕ್ರಮ ಕೈಗೊಳ್ಳಲಾಗದು ಎಂದು ದೂರನ್ನು ವಜಾ ಮಾಡುವಂತೆ ಕೋರಿ ಎದುರುದಾರರು ಆಕ್ಷೇಪಣೆ ಹಾಕಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಅ.ಬೋಳಶೆಟ್ಟಿ ಈ ಪ್ರಕರಣದ ಸಂಗತಿಗಳನ್ನು ಅವಲೋಕಿಸಿದಾಗ ದೂರುದಾರರ ಇಬ್ಬರೂ ಮಕ್ಕಳ ಪಾಸ್‌ಪೋರ್ಟ್ ನೀಡುವ ಬಗ್ಗೆ ಅಥವಾ ಸದಸ್ಯೆ ನೀಡುವ ವಿಷಯದಲ್ಲಿ ನ್ಯೂನತೆ ಆಗಿಲ್ಲ. ಆದರೆ 2029ರವರೆಗೆ ಕಾನೂನುಬದ್ಧವಾಗಿದ್ದ ದೂರುದಾರರ ಪಾಸ್‌ಪೋರ್ಟ್ ರದ್ದಾಗಿದೆ ಅನ್ನುವ ಸೀಲ್ ಹಾಕಿರುವುದು ಪಾಸ್‌ಪೋರ್ಟ್ ಇಲಾಖೆಯ ಸಿಬ್ಬಂದಿಯಿAದ ತಪ್ಪಾಗಿದೆ. ಆ ತಪ್ಪಿನಿಂದ ನಿಗದಿಯಾಗಿದ್ದ ದುಬೈ ಪ್ರವಾಸವನ್ನು ಎಲ್ಲ ದೂರುದಾರರು ಒಂದು ದಿನ ಮೂಂದೂಡಬೇಕಾಯಿತು. ಅದಕ್ಕಾಗಿ ಮೊದಲಿನ ದಿನದ ವಿಮಾನ ಟಿಕೇಟು ನಿರುಪಯುಕ್ತವಾಗಿದೆ. ಬೇರೆ ವಿಮಾನ ಟಿಕೇಟ್ ಖರೀದಿಸಲು ಹಣ ಖರ್ಚು ಮಾಡಿದ್ದಾರೆ. ಪಾಸ್‌ಪೋರ್ಟ್ ಸರಿಪಡಿಸಲು ದೂರುದಾರ ರೂ.11,000 ಖರ್ಚು ಮಾಡಿ ಇನ್ನುಳಿದಂತೆ ವಸತಿ ಮತ್ತು ಇತರೇ ಖರ್ಚು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಎಲ್ಲ ಕಾರಣಗಳಿಗಾಗಿ ಎದುರುದಾರ ಪಾಸ್‌ಪೋರ್ಟ್ ಇಲಾಖೆಯಿಂದ ದೂರುದಾರರಿಗೆ ಸೇವಾ ನ್ಯೂನತೆ ಆಗಿದೆ ಎಂದು ಅಭಿಪ್ರಾಯಪಟ್ಟು ಈ ಬಗ್ಗೆ ಎದುರುದಾರರು ಎತ್ತಿರುವ ಆಕ್ಷೇಪಣೆಗಳನ್ನು ತಳ್ಳಿಹಾಕಿ ಆಯೋಗ ತೀರ್ಪು ನೀಡಿದೆ.
ದೂರುದಾರರ ಹೆಚ್ಚುವರಿ ವಿಮಾನ ಟಿಕೇಟ್ ವೆಚ್ಚ ರೂ.62,876+ರೂ.11,000 ಪಾಸ್‌ಪೋರ್ಟ್ ಸರಿಪಡಿಸುವ ಖರ್ಚು, ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಮತ್ತು ಅವರ ಒಂದು ದಿನದ ವಾಸ್ತವ್ಯದ ಖರ್ಚು ವೆಚ್ಚ ಸೇರಿ ತಲಾ ರೂ.50,000ನಂತೆ ಒಟ್ಟು ರೂ.2 ಲಕ್ಷ ರೂಪಾಯಿ ಪರಿಹಾರ ಹಾಗೂ ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಆಯೋಗ ಎದುರುದಾರರ ಪಾಸ್‌ಪೋರ್ಟ್ ಇಲಾಖೆಗೆ ನಿರ್ದೇಶಿಸಿದೆ.