ಗದಗ:- ಮೀಟರ್ ಬಡ್ಡಿ ದಂಧೆಯ ಕಿರುಕುಳ ತಾಳಲಾರದೆ ಇಡೀ ಕುಟುಂಬವೇ ಊರು ಬಿಟ್ಟಿರುವ ಘಟನೆ ಗದಗ ಜಿಲ್ಲೆಯಲ್ಲಿ ಜರುಗಿದೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಒಂದೆಡೆಯಾದರೆ, ಮತ್ತೊಂದೆಡೆ ಮೀಟರ್ ಬಡ್ಡಿದಂಧೆಕೋರರ ಹಾವಳಿ ಬೇರೆ ಹೆಚ್ಚಾಗಿದೆ. ಅದರಲ್ಲೂ ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಮಿತಿಮೀರಿದೆ. ಅಷ್ಟೇ ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಈ ದಂಧೆಕೋರರು ಕಿರುಕುಳ ಕೊಡುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಸ್ಟೋರಿ ಪೂರ್ತಿ ಓದಿ.
ಹೌದು, ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿದೆ. ಅದರಂತೆ ಪರಶುರಾಮ ಹಬೀಬ್ ಎಂಬುವವರ ಬಳಿ ಬಡ್ಡಿ ದಂಧೆಕೋರರು, 50 ಸಾವಿರ ರೂಪಾಯಿ ಸಾಲಕ್ಕೆ 1 ಲಕ್ಷ 50 ರೂಪಾಯಿ ಬಾಂಡ್ ಮಾಡಿಸಿಕೊಂಡಿದ್ದಾರಂತೆ. ಹೀಗಾಗಿ ಒಂದು ಸಾಲ ತೀರಿಸೋಕೆ ಹೋಗಿ ಮತ್ತೊಂದು ಕಡೆ ಚಕ್ರ ಬಡ್ಡಿಗೆ ಸಾಲ ಮಾಡಿಕೊಂಡು ಇದೀಗ ಕುಟುಂಬದ ಜೊತೆಗೆ ಇಡೀ ಊರನ್ನೇ ಬಿಟ್ಟು ಹೋಗಿದ್ದಾರೆ. ಅಲ್ಲದೇ ಬಡ್ಡಿದಾರರ ಕಿರುಕುಳಕ್ಕೆ ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ. ಆದರೆ ಮಕ್ಕಳ ಮುಖ ನೋಡಿ, ಆತ್ಮಹತ್ಯೆ ಮಾಡಿಕೊಳ್ಳೋದನ್ನು ಬಿಟ್ಟಿದ್ದೇನೆ ಎಂದು ನಿಗೂಢ ಸ್ಥಳದಿಂದ ವಿಡಿಯೋ ಮಾಡಿ ಪರಶುರಾಮ್ ಕಣ್ಣೀರು ಹಾಕಿದ್ದಾರೆ.
ಪರಶುರಾಮ ಹಬೀಬ್ ಎಂಬಾತ, ಹಲವಾರು ಕಡೆ ಸುಮಾರು 60 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರಂತೆ. ಇದೀಗ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ತಾವು ನಡೆಸುತ್ತಿದ್ದ ಕ್ಯಾಂಟೀನ್ಗೆ ಬೀಗ ಹಾಕಿ ಜೀವ ಭಯದಿಂದ ಕುಟುಂಬ ಸಮೇತ ಊರು ಬಿಟ್ಟ ಹೋಗಿದ್ದಾರೆ.
ಕೊಟ್ಟಿರುವ ಕವಡೆ ಕಾಸಿಗೆ ಲಕ್ಷ ಲಕ್ಷ ಬಡ್ಡಿ ಹಾಕಿ ಕಿರುಕುಳ ಕೊಟ್ಟಿರುವ ಆರೋಪವೂ ಕೇಳಿ ಬಂದಿದೆ. ಹೀಗಾಗಿ ಜೀವ ಭಯದಿಂದ ಪರಶುರಾಮ ಕುಟುಂಬ ಊರು ತೊರೆದಿದೆ.
ಇನ್ನೂ ಸಾಲ ಪಡೆದ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಮಾಲೀಕ ನಾಪತ್ತೆಯಾದ ಹಿನ್ನೆಲೆ ಸಾಕು ನಾಯಿ ಅನಾಥವಾಗಿದ್ದು, ಕ್ಯಾಂಟೀನ್ ಮುಂದೆ ಒಂಟಿಯಾಗಿ ನಾಯಿ ಕುಳಿತಿರುವ ಈ ದೃಶ್ಯ ಕರುಳು ಹಿಂಡುವಂತೆ ಮಾಡಿದೆ.
ಒಟ್ಟಾರೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಮೀಟರ್ ಬಡ್ಡಿ ಧಂದೆಕೋರರ ಹಾವಳಿ ಮಿತಿ ಮೀರಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿ ಆಗಿದೆ.