ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್‌ನವರು ಅಂಬೇಡ್ಕರ್ ಅವರಿಗೆ ಮಾಡಿರುವ ಅನ್ಯಾಯ, ಅಪಚಾರಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಶುಕ್ರವಾರ ಗದಗ ಶಹರದ ವಿಠ್ಠಲಾರೂಢ ಸಭಾಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಗದಗ ಹಾಗೂ ಭಾರತೀಯ ಜನತಾ ಪಾರ್ಟಿ ಗದಗ ಇವರ ವತಿಯಿಂದ ಏರ್ಪಡಿಸಿದ್ದ ಸಂವಿಧಾನ ಸನ್ಮಾನ, ಪುಸ್ತಕ ಲೋಕಾರ್ಪಣೆ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಸಂವಿಧಾನ ರಚನೆಯಾಗಿ 75 ವರ್ಷ ಕಳೆದಿದೆ. ಅದರ ಪರ ಮತ್ತು ವಿರೋಧ ಯಾರಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಸಂವಿಧಾನ ರಚನೆಯ ನಂತರ ಕಾಂಗ್ರೆಸ್‌ನವರು ಆಡಳಿತ ಶುರು ಮಾಡಿ ಸಂವಿಧಾನಕ್ಕೆ ಅಪಚಾರ ಮಾಡಿರುವುದು ಚರ್ಚಾ ವಿಷಯವಾಗಿದೆ. ಇಡೀ ಜಗತ್ತಿನಲ್ಲಿಯೇ ಶ್ರೇಷ್ಠವಾಗಿರುವ ಸಂವಿಧಾನ, ಜೀವಂತವಾಗಿರುವ, ಜನರಿಗೆ ಸ್ಪಂದಿಸುವ ಸಂವಿಧಾನ ಯಾವುದಾದರೂ ಇದ್ದರೆ ಅದು ಭಾರತದ ಸಂವಿಧಾನವಾಗಿದೆ ಎಂದರು.
ಗಾಂಧೀಜಿಯವರ ಹೆಸರು ಹೇಳಬೇಕೆಂದರೆ ಕಾಂಗ್ರೆಸ್ ವಿಸರ್ಜನೆ ಆಗಬೇಕು. ಗಾಂಧೀಜಿ ಕೂಡ ಸ್ವಾತಂತ್ರ‍್ಯ ಬಂದ ನಂತರ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು. ಕಾಂಗ್ರೆಸ್‌ನವರು ಅಂಬೇಡ್ಕರ್ ಅವರಿಗೆ ಮಾಡಿರುವ ಅನ್ಯಾಯ, ಅಪಚಾರಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಎಸ್ಸಿ-ಎಸ್ಟಿಗೆ ಮೀಸಲಿಟ್ಟಿದ್ದ ಹಣವನ್ನು ಲೂಟಿ ಮಾಡಿದವರು ಕಾಂಗ್ರೆಸ್‌ನವರು, ವಾಲ್ಮೀಕಿ ನಿಗಮದಲ್ಲಿ ಇಷ್ಟು ದೊಡ್ಡ ಹಗರಣವಾದರೂ ಯಾರಿಗೂ ಶಿಕ್ಷೆಯಾಗಲಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ನನ್ನ ಧರ್ಮ ಗ್ರಂಥ ಎಂದು ಹೇಳಿದರು. ಬಿಜೆಪಿಯವರು ಸಂವಿಧಾನ ತಿದ್ದುಪಡಿ ಮಾಡಿದ್ದೇವೆ. ಕಾಶ್ಮೀರಕ್ಕೆ ಸ್ವಾತಂತ್ರ‍್ಯ ಕೊಡಲು 370ನೇ ವಿಧಿ ರದ್ದು ಮಾಡಲು ಸಂವಿಧಾನ ತಿದ್ದುಪಡಿ ಮಾಡಿದ್ದೇವೆ. ವಾಜಪೇಯಿಯವರು ಎಸ್ಸಿ-ಎಸ್ಟಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಒಬಿಸಿ ಆಯೋಗಕ್ಕೆ ಸಂವಿಧಾನ ಮಾನ್ಯತೆ ನೀಡಲು ತಿದ್ದುಪಡಿ ಮಾಡಿದ್ದಾರೆ. ಕಾಂಗ್ರೆಸ್‌ನವರು ಸ್ವಾರ್ಥಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿದರು. ಜನರ ಹಕ್ಕುಗಳನ್ನು ಕಿತ್ತು ಹಾಕಿದರು. ಯಾರೂ ಕೂಡ ಸರ್ಕಾರದ ವಿರುದ್ದ ಮಾತನಾಡದಂತೆ ತುರ್ತು ಪರಿಸ್ಥಿತಿ ತಂದರು. ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಿದೆ. ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶಾಸಕರಾದ ಸಿ.ಸಿ. ಪಾಟೀಲ್, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ಪಿ. ರಾಜೀವ, ಕಳಕಪ್ಪ ಬಂಡಿ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮುಳಗುಂದ, ಮುಖಂಡರಾದ ರವಿ ದಂಡಿನ, ಮಹೀಂದ್ರ ಕೌತಾಳ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕನಕದಾಸರ ರಾಮಧಾನ್ಯ ಚರಿತೆಯಲ್ಲಿ ರಾಗಿ ಮತ್ತು ಅಕ್ಕಿಗೆ ಹೋಲಿಕೆ ಮಾಡಿ ಸಮಾಜದಲ್ಲಿ ಸಮಾನತೆ ಬಗ್ಗೆ ಹೇಳಿದ್ದಾರೆ. ಅದೆಲ್ಲ ಅಂಶ ನಮ್ಮ ಸಂವಿಧಾನದಲ್ಲಿದೆ. ನಾವೆಲ್ಲ ಕಾನೂನಾತ್ಮಕ ಆಡಳಿತ ಮಾಡಬೇಕೆಂದು ಹೇಳುತ್ತೇವೆ. ಕಾನೂನಿನ ಅಡಿ ಎಲ್ಲರೂ ಸಮಾನರು. ಭ್ರಾತೃತ್ವ, ಸೌಹಾರ್ದತೆ, ಏಕತೆ, ಅಖಂಡತೆ ಇವೆಲ್ಲ ಸಂವಿಧಾನದಲ್ಲಿದೆ. ಇದರ ವಿರುದ್ಧ ಕಾಂಗ್ರೆಸ್ ಇದೆ. ಸ್ವಾತಂತ್ರ‍್ಯ ಬಂದ ಕೂಡಲೇ ಕಾಂಗ್ರೆಸ್ ದೇಶವನ್ನು ಇಬ್ಭಾಗ ಮಾಡಿತು. ಸಮಾನತೆ ಎಂದರೆ ಸಾಮಾಜಿಕ, ಆರ್ಥಿಕ ಸಮಾನತೆ ಇರಬೇಕೆಂದು ಸಂವಿಧಾನದಲ್ಲಿ ಹೇಳಿದೆ. ಕಾಂಗ್ರೆಸ್‌ನವರು ಆರ್ಥಿಕ ಅಸಮಾನತೆ ಉಂಟುಮಾಡಿದರು. ಗರೀಬಿ ಹಠಾವೊ ಅಂದರು, ಗರೀಬರನ್ನೇ ಹಠಾವೋ ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.