ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ನಗರ ಹಾಗೂ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸುಲಭ ಹಾಗೂ ಅಧಿಕ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿರುವ ಮೈಕ್ರೋ ಫೈನಾನ್ಸ್ಗಳು ಸಾಲ ವಸೂಲಿಗಾಗಿ ಜನರಿಗೆ ಕಿರುಕುಳ ನೀಡುತ್ತಿರುವುದರಿಂದ ರಾಜ್ಯದಲ್ಲಿ ಸಾಲ ಪಡೆದಿರುವ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೈಕ್ರೋ ಫೈನಾನ್ಸ್ಗಳ ವ್ಯಾಪಕ ಕಿರುಕುಳಕ್ಕೆ ಹೆದರಿ ಗ್ರಾಮಗಳನ್ನೇ ತೊರೆಯುತ್ತಿದ್ದಾರೆ. ಆತ್ಮಹತ್ಯೆಗಳೂ ನಡೆಯುತ್ತಿದ್ದು, ತಕ್ಷಣ ಬಡ ಜನರ ರಕ್ತ ಹೀರುತ್ತಿರುವ ಮೈಕ್ರೋ ಫೈನಾನ್ಸ್ ಹಾಗೂ ಬಡ್ಡಿ ದಂಧೆಕೋರರ ಹಾವಳಿಗೆ ಕಡಿವಾಣ ಹಾಕುವಂತೆ ಸ್ಲಂ ಜನಾದೋಲನ ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮನವಿ ಸಲ್ಲಿಸಿ ಮಾತನಾಡಿ, ನಮ್ಮ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಪ್ರಾಣ ಕಳೆದುಕೊಳ್ಳವವರ ಸಂಖ್ಯೆ ಹೆಚ್ಚುತ್ತಿದೆ. ಬಡ ಕುಟುಂಬಗಳಿಗೆ ಆಸೆ-ಆಮಿಷಗಳನ್ನು ತೋರಿಸಿ ಸಾಲ ನೀಡುತ್ತಿರುವ ಮೈಕ್ರೋ ಫೈನಾನ್ಸ್ಗಳು ಸಾಲ ವಸೂಲಾತಿ ಸಂರ್ಭದಲ್ಲಿ ಬಡ್ಡಿ ಮೇಲೆ ಬಡ್ಡಿ ಹಾಕಿ ಸಾಲಗಾರರಿಂದ ಹಣ ವಸೂಲಿ ಮಾಡುತ್ತಿರುವುದ್ದರಿಂದ ಸಾಲ ಪಡೆದುಕೊಂಡಿರುವ ಬಡ ಕುಟುಂಬಗಳು ತಮ್ಮ ಮನೆಗಳಿಗೆ ಬೀಗ ಹಾಕಿ ಊರುಗಳನ್ನು ಬಿಟ್ಟು ಹೋಗುತ್ತಿದ್ದಾರೆ ಎಂದರು.
ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಮಂಜುನಾಥ ಶ್ರೀಗಿರಿ, ಮಕ್ತುಮಸಾಬ ಮುಲ್ಲಾನವರ, ಖಾಜಾಸಾಬ ಬಳ್ಳಾರಿ, ಶಂಕ್ರಪ್ಪ ರೋಣದ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೂಡಲೇ ಮುಖ್ಯಮಂತ್ರಿಗಳು ಎಚ್ಚೆತ್ತು ಮೈಕ್ರೋ ಫೈನಾನ್ಸ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಸೂಲಿ ನೆಪದಲ್ಲಿ ಬಡವರಿಗೆ ಕಿರುಕುಳ ನೀಡುತ್ತಿರುವ ಫೈನಾನ್ಸ್ ಸಿಬ್ಬಂದಿಗಳ ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಲು ರಾಜ್ಯದ ಪೊಲೀಸ್ ಇಲಾಖೆಗೆ ಆದೇಶಿಸಬೇಕು, ಕಠಿಣ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.