ವಿಜಯಸಾಕ್ಷಿ ಸುದ್ದಿ, ಗದಗ: ಶಿಲಾಮೂರ್ತಿಗೆ ಜೀವಕಳೆ ತುಂಬುವ ಕಲೆ ಶಿಲ್ಪಕಲಾವಿದರಿಗೆ ದೇವರು ಕೊಟ್ಟ ವರ. ಶಿಲ್ಪ ಕಲಾವಿದರು ಬಡವರಿರಬಹುದು ಆದರೆ ಅವರ ಕಲಾವಂತಿಕೆ ಶ್ರೀಮಂತವಾದುದು ಎಂದು ಅವ್ವ ಸೇವಾ ಟ್ರಸ್ಟ್ ಸಂಚಾಲಕ ಡಾ. ಬಸವರಾಜ ಧಾರವಾಡ ಅಭಿಪ್ರಾಯಪಟ್ಟರು.
ಅವರು ಸಭಾಪತಿ ಬಸವರಾಜ ಹೊರಟ್ಟಿಯವರ ದಿವಂಗತ ತಂದೆಯವರಾದ ಶಿವಲಿಂಗಪ್ಪ ಹೊರಟ್ಟಿಯವರ ಶಿಲಾಮೂರ್ತಿ ನಿರ್ಮಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪ ಕಲಾವಿದ ರಾಘವೇಂದ್ರ ಆಚಾರ್ಯ ಶಿಲ್ಪಿ ಅವರನ್ನು ಸನ್ಮಾನಿಸಿ ಮಾತನಾಡಿ, ಆಕಾರವಿಲ್ಲದ ಕಲ್ಲಿಗೆ ಆಕಾರ, ರೂಪ ನೀಡಿ ಜೀವಕಳೆ ತುಂಬುವ ಮೂಲಕ ಮುಂದಿನ ದಿನಮಾನಗಳಲ್ಲಿ ಪೂಜಿಸುವ ಮೂರ್ತಿಯನ್ನಾಗಿ ಮಾಡುವ ಕಲಾವಿದರ ಶ್ರಮ ಬಹಳ ದೊಡ್ಡದು. ಅವರ ಸೇವೆಯನ್ನು ಸಮಾಜ, ಸರಕಾರ ಗುರುತಿಸುವ ಮೂಲಕ ಈ ಕಲೆಯನ್ನು ಬೆಳೆಸಿಕೊಂಡು ಹೋಗುವಲ್ಲಿ ಪ್ರೋತ್ಸಾಹಿಸುವುದು ಅತ್ಯವಶ್ಯವಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ ಮಾತನಾಡಿ, ಇವರ ಶಿಲ್ಪಕಲಾ ಶಾಲೆಯಲ್ಲಿ ಹಲವಾರು ಮೂರ್ತಿಗಳು, ಗಣ್ಯಮಾನ್ಯರ ಪುತ್ಥಳಿಗಳು ಅರಳಿ ದೇಶದ ತುಂಬೆಲ್ಲ ಪ್ರತಿಷ್ಠಾಪಿತಗೊಂಡಿರುವುದು ನಮಗೆಲ್ಲ ಖುಷಿಯ ಸಂಗತಿ. ಶಿಲ್ಪ ಕಲಾವಿದ ರಾಘವೇಂದ್ರ ಆಚಾರ್ಯ ಕೂಡ ಬಹುದೊಡ್ಡ ಕಲಾವಿದ. ಅವರಿಗೆ ಪ್ರೋತ್ಸಾಹಿಸಿ ಗೌರವಿಸುವ ಮೂಲಕ ಶಿಲ್ಪ ಕಲೆಯನ್ನು ಪೋಷಿಸುವ ಹೊಣೆಗಾರಿಗೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜ ಸೊರಗೊಂಡ, ಶಿಲ್ಪ ಕಲಾವಿದರಾದ ಗುರುಮೂರ್ತಿ ಶಿಲ್ಪಿ, ವಿಜಯಕುಮಾರ ಎನ್.ಬೆಟಗೇರಿ, ಈರಣ್ಣ, ಹೇಮಣ್ಣ, ಹರೀಶ, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.