ದಾವಣಗೆರೆ:- ರಾಜ್ಯದ ನಾನಾ ಭಾಗಗಳಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದೆ. ಅದರಂತೆ ದಾವಣಗೆರೆಯಲ್ಲಿಯೂ ವೃದ್ಧ ದಂಪತಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಎಸ್, ರೇಣುಕಮ್ಮ ಎಂಬ ಮಹಿಳೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ತೀರಿಸುವಂತೆ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಈ ಹಿಂದೆ ರೇಣುಕಮ್ಮ ಫೈನಾನ್ಸ್ ಕಂಪನಿ ಒಂದರಲ್ಲಿ ಸಾಲ ಮಾಡಿದ್ದರು. ನಂತರ ಫೈನಾನ್ಸ್ ಕಂಪನಿ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಹಸು ಮಾರಿ ಸಾಲವನ್ನು ತೀರಿಸಿದ್ದರು. ಇದಾದ ಬಳಿಕ ಅನಾರೋಗ್ಯದ ಕಾರಣ ಆಸ್ಪತ್ರೆ ಖರ್ಚಿಗಾಗಿ ಮೈಕ್ರೋ ಫೈನಾನ್ಸ್ ನಲ್ಲಿ ಮತ್ತೆ ಸಾಲ ಮಾಡಿದ್ದಾರೆ. ಇದೀಗ ಬಾಕಿ ಸಾಲ ಪಾವತಿ ಮಾಡುತ್ತಿದ್ದರೂ ಸಹ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ಮಹಿಳೆಯ ಮನೆಗೆ ಬಂದು ಬೆದರಿಕೆ ಹಾಕಿ, ಸಾಲ ತೀರಿಸುವಂತೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ವೃದ್ಧ ದಂಪತಿಗಳು ಬೇಸತ್ತಿದ್ದಾರೆ.
ರಾಜ್ಯದಲ್ಲಿ ದಿನೇದಿನೇ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಹೆಚ್ಚಾಗುತ್ತಿದ್ದು, ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.