ಶಾಸನಗಳ ಕುರಿತು ನಿಷ್ಕಾಳಜಿ ಸಲ್ಲದು: ಕುಲಪತಿ ಪ್ರೊ. ಪರಮಶಿವಮೂರ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶಾಸನಗಳು ಕೇವಲ ಇತಿಹಾಸದ ವಿವರಗಳಲ್ಲ. ಅವು ನಮ್ಮ ಭವ್ಯ ಪರಂಪರೆಯ ಕುರುಹುಗಳಾಗಿದ್ದು, ಸದ್ಯ ನಮ್ಮನ್ನು ಕಾಡುತ್ತಿರುವ ಸಮಕಾಲೀನ ತಲ್ಲಣಗಳಿಗೆ ಶಾಸನಗಳ ಅಧ್ಯಯನ ಅಥವಾ ವಿಮರ್ಶೆ ಪರಿಹಾರ ನೀಡಬಲ್ಲದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪರಮಶಿವಮೂರ್ತಿ ನುಡಿದರು.

Advertisement

ಸೋಮವಾರ ನಗರದ ಬಸವೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಮಹಾವಿದ್ಯಾಲಯದಲ್ಲಿ ಜ.27ರಿಂದ 31ರವರೆಗೆ ಜರುಗಲಿರುವ `ಕನ್ನಡ ಶಾಸನಗಳ ಅಧ್ಯಯನ ಮತ್ತು ಸಂಶೋಧನೆ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮ ಪೂರ್ವಿಕರು ಕನಿಷ್ಠ ಸವಲತ್ತುಗಳ ಮಧ್ಯೆಯೂ ಮೌಲ್ಯಯುತ ಜೀವನ ಸಾಗಿಸುತ್ತಿದ್ದರು ಹಾಗೂ ಮನಃಶಾಂತಿಯೇ ಶ್ರೇಷ್ಠ ಸಂಪತ್ತು ಎಂಬ ಪ್ರಜ್ಞೆ ಅವರಿಗೆ ಇತ್ತು ಎನ್ನುವ ವಿವರಗಳನ್ನು ಶಾಸನಗಳಂತಹ ಪುರಾತತ್ವ ಆಕರಗಳು ತಿಳಿಸುತ್ತವೆ. ನಗರೀಕರಣವು ಉತ್ತುಂಗ ತಲುಪಿರುವ ಇಂದಿನ ದಿನಗಳಲ್ಲಿ ಮನುಷ್ಯತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಬದುಕು ಮೌಲ್ಯರಹಿತವಾಗುತ್ತಿದೆ, ಶಾಸನಗಳು ಸ್ಥಳೀಯ ಇತಿಹಾಸವನ್ನು ಪರಿಣಾಮಕಾರಿಯಾಗಿ ತಿಳಿಸಿಕೊಡುವುದರಿಂದ ವರ್ತಮಾನದ ಪುನರಾವಲೋಕನಕ್ಕೆ ಅವುಗಳ ಅಧ್ಯಯನ ದಿವ್ಯ ಔಷಧವಾಗಿದೆ ಎಂದರು.

ಗದಗ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಸಾವಿರ ವರ್ಷಕ್ಕೂ ಹೆಚ್ಚು ಪುರಾತನವಾದ ಅನೇಕ ಶಾಸನಗಳಿದ್ದು, ಅವುಗಳ ಅಧ್ಯಯನದ ವಿವರಗಳುಳ್ಳ ಗ್ರಂಥವನ್ನು ಶೀಘ್ರವೇ ಓದುಗರ ಕೈಗಿಡಲಿದ್ದೇನೆ. ಶಾಸನಗಳ ಕುರಿತು ನಿಷ್ಕಾಳಜಿ-ಅನಾದರ ಸಲ್ಲದು. ಅವುಗಳ ಸಂರಕ್ಷಣೆ ಹಾಗೂ ಅಧ್ಯಯನ ಇಂದಿನ ಅನಿವಾರ್ಯತೆಯಾಗಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಶಾಸನಗಳನ್ನು ಓದಿ-ಅರ್ಥೈಸುವ ತಜ್ಞರ ಕೊರತೆ ಇಂದು ಹೆಚ್ಚಿದ್ದು, ಅದಕ್ಕೆ ಪರಿಹಾರವೆಂಬAತೆ ಇಂತಹ ಕಾರ್ಯಾಗಾರವನ್ನು ಆಯೋಜಿಸಿರುವುದು ಶ್ಲಾಘನೀಯ. ಜನಪದ, ಲಾವಣಿ ಪದ, ವೀರಗಲ್ಲು-ಮಾಸ್ತಿಗಲ್ಲು ಹಾಗೂ ಶಾಸನಗಳು ಜನಸಾಮಾನ್ಯರ ನೈಜ ಇತಿಹಾಸವನ್ನು ತಿಳಿಸುವ ಆಕರಗಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಸನಗಳ ಕುರಿತು ಇರುವ ಅವಜ್ಞೆ ಕಳವಳಕಾರಿಯಾಗಿದೆ. ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲಲು ನೆರವಾಗುವ ಶಾಸನಗಳನ್ನು ರಕ್ಷಿಸಲು ಇರುವ ಸಂಸ್ಥೆಗಳಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಶಾಸನ ತಜ್ಞರಾದ ಡಾ. ಹನುಮಾಕ್ಷಿ ಗೋಗಿ ಮಾತನಾಡಿ, ಗದಗ ಜಿಲ್ಲೆ ಕರ್ನಾಟಕದ ನಿಜವಾದ ಸಾಂಸ್ಕೃತಿಕ ರಾಜಧಾನಿಯಾಗಿದೆ. ಇನ್ನೂ ಅಧ್ಯಯನಕ್ಕೆ ಒಳಪಡಬೇಕಾದ ಅನೇಕ ಶಾಸನಗಳು ಇಲ್ಲಿವೆ. ಭಾರತದ ಶಾಸನಗಳ ಅಧ್ಯಯನದಲ್ಲಿ ವಿದೇಶಿಗರ ಕೊಡುಗೆಯೂ ಸಾಕಷ್ಟಿದ್ದು, ಶಾಸನಗಳ ಕುರಿತು ಗ್ರಾಮೀಣ ಜನರು ಬೆಳೆಸಿಕೊಂಡಿರುವ ಮೂಢನಂಬಿಕೆಯನ್ನು ಅಳಿಸಬೇಕಾಗಿದೆ. ಕೇವಲ 30-35 ವರ್ಷಗಳ ಹಿಂದೆ ಕಾಣಸಿಗುತ್ತಿದ್ದ ಶಾಸನಗಳು ಇಂದು ಕಣ್ಮರೆಯಾಗಿದ್ದು, ಈ ಕುರಿತು ಗಂಭೀರ ಚಿಂತನೆಗಳು ನಡೆಯಬೇಕಿದೆ ಎಂದರು.
ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಎನ್.ಎಂ ತಳವಾರ ಸ್ವಾಗತಿಸಿ ಕಾರ್ಯಗಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಂ.ಎಂ. ಬುರಡಿ ಉಪಸ್ಥಿತರಿದ್ದರು.
ಚಂದ್ರಪ್ಪ ಬಾರಂಗಿ ನಿರೂಪಿಸಿದರು. ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯ ಸಂಯೋಜಕರಾದ ಡಾ. ಅರ್ಜುನ ಗೊಳಸಂಗಿ ವಂದಿಸಿದರು. ಶಿಬಿರಾರ್ಥಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಾಸನಗಳು ಅಥವಾ ಯಾವುದೇ ಪ್ರಾಚ್ಯ ಅವಶೇಷಗಳ ಕುರಿತು ಇರುವ ಅಸಡ್ಡೆಗೆ ಶಿಕ್ಷಣದ ಅಥವಾ ತಿಳುವಳಿಕೆಯ ಕೊರತೆ ಕಾರಣವಾಗಿದೆ. ಮಕ್ಕಳಿಗೆ ಪ್ರೌಢ ಶಿಕ್ಷಣ ಹಂತದಲ್ಲೇ ಪ್ರಾಚ್ಯವಸ್ತುಗಳ ಮಹತ್ವದ ಕುರಿತು ಅರಿವು ಮೂಡಿಸಿ ಅವುಗಳ ಕುರಿತು ಆಸಕ್ತಿಯನ್ನು ಹುಟ್ಟುಹಾಕಬೇಕು. ಅಂದಾಗ ಮಾತ್ರ ಶಾಸನಗಳ ಸಂರಕ್ಷಣೆ-ಅಧ್ಯಯನ ಸಾಧ್ಯ ಎಂದರು.


Spread the love

LEAVE A REPLY

Please enter your comment!
Please enter your name here