ಗದಗ/ ಲಕ್ಷ್ಮೇಶ್ವರ: ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿಯಿಂದ ಮನೆ ಸೀಜ್ ಮಾಡಿದ ಹಿನ್ನಲೆ ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ರಂಭಾಪುರಿ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ರವಿ ಹೆಬ್ಬಾಳ ಆತ್ಮಹತ್ಯಗೆ ಯತ್ನಿಸಿದ ಯುವಕನಾಗಿದ್ದು, ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ.
ಅಸ್ವಸ್ಥಗೊಂಡ ರವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಶ್ರಯ ಮನೆ ಕಟ್ಟಿಸಿಕೊಳ್ಳಲು ಕೆನರಾ ಬ್ಯಾಂಕ್ ನಿಂದ ರವಿ ಹೆಬ್ಬಾಳ ಕುಟುಂಬ 2017 ರಲ್ಲಿ 3 ಲಕ್ಷ ರೂಪಾಯಿ ಸಾಲ ಪಡೆದಿದ್ದರು.
ಮೂರು ವರ್ಷಗಳ ಕಾಲ 2 ಲಕ್ಷ ರೂಪಾಯಿ ತೀರಿಸಿದ್ದರು. ಆದ್ರೆ ಕೋವಿಡ್ ಹಾಗೂ ಆರೋಗ್ಯದಲ್ಲಾದ ಏರುಪೇರಿನಿಂದಾಗಿ ಸಾಲದ ಕಂತು ಕಟ್ಟದೇ 1 ಲಕ್ಷ ಬಾಕಿ ಉಳಿಸಿಕೊಂಡಿದ್ದರು. ಬ್ಯಾಂಕ್ ಸಿಬ್ಬಂದಿ ಇನ್ನೂ ಐದು ಲಕ್ಷ ರೂಪಾಯಿ ಬಾಕಿ ಇದೆ ಅಂತಾ ನೋಟಿಸ್ ನೀಡಿ, ಮನೆ ಸೀಜ್ ಮಾಡಲು ಮುಂದಾಗಿದ್ದರು.
ಬಾಕಿ ಸಾಲ ಮರುಪಾವತಿ ಮಾಡುವುದಾಗಿ ಮನವಿ ಮಾಡಿದ್ರು ಕ್ಯಾರೇ ಎನ್ನದೇ ಕೋರ್ಟ್ ಆದೇಶ ಇರುವುದರಿಂದ ಬ್ಯಾಂಕ್ ಅಧಿಕಾರಿಗಳು ಮನೆ ಸೀಜ್ ಮಾಡಿದ್ದಾರೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಸಿದ್ದಾನೆ.
ಇನ್ನೂ ಅಸಲು ಹಣ ಕಟ್ಟುತ್ತೇವೆ ಅಂತಾ ಹೇಳಿದರೂ ಕಲಾವಕಾಶ ನೀಡದೇ ಮನೆ ಸೀಜ್ ಮಾಡಿದ್ದಾರೆ. ಮನವಿ ಮಾಡಿದರೂ ಮನೆ ಸಾಮಾನು ಹೊರ ಹಾಕಿ ಮನೆ ಸೀಜ್ ಮಾಡಿದ್ರು ಅಂತ ರವಿ ಸಹೋದರಿ ಲಲಿತಾ ಮಡಿವಾಳರ್ ಕಣ್ಣೀರಿಟ್ಟಿದ್ದಾರೆ.