ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ತೊಗರಿ ಬೆಳೆಗಾರರ ಹಿತಕಾಪಾಡಲು ಅಸ್ತಿತ್ವಕ್ಕೆ ಬಂದಿರುವ ತೊಗರಿ ಅಭಿವೃದ್ಧಿ ಮಂಡಳಿಯಂತೆ ಕಡಲೆ ಬೆಳೆಗಾರರ ಹಿತರಕ್ಷಣೆಗಾಗಿ ಕಡಲೆ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ರೈತಸೇನಾ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನರೇಗಲ್ಲ ಘಟಕದ ಅಧ್ಯಕ್ಷ ಶರಣಪ್ಪ ಧರ್ಮಾಯತ ಮಾತನಾಡಿ, ರಾಜ್ಯ ಸರ್ಕಾರವು ತೊಗರಿ ಬೆಳೆಗೆ ಪ್ರೋತ್ಸಾಹ ಧನವನ್ನು ಘೋಷಿಸಿದ್ದು ಕಡಲೆ ಬೆಳೆಗಾರರನ್ನು ಕಡೆಗಣಿಸಿ, ಕಡಲೆ ಬೆಳೆಗಾರರಿಗೆ ನೋವುಂಟುಮಾಡಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ವಾಣಿಜ್ಯ ಬೆಳೆಯಾಗಿ ಕಡಲೆಯನ್ನು ಬೆಳೆಯಲಾಗುತ್ತಿದೆ. ಹವಾಮಾನ ವೈಪರಿತ್ಯದಿಂದಾಗಿ ಕಡಲೆ ಬೆಳೆಗೆ ಸಿಡಿ ರೋಗ, ಕೀಟ ಬಾಧೆ ಸೇರಿದಂತೆ ಇತರೆ ರೋಗಗಳು ಬಂದು ನಿರೀಕ್ಷಿತ ಇಳುವರಿ ಸಿಗುತ್ತಿಲ್ಲ. ಆದ್ದರಿಂದ, ಕಡಲೆ ಬೆಳೆ ಬೆಳೆಯುವ ರೈತರ ಹಿತದೃಷ್ಟಿಯಿಂದ ಗದುಗಿನಲ್ಲಿ ಕಡಲೆ ಬೆಳೆ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಬೇಕು.
ರೈತ ಮುಖಂಡ ಚಂದ್ರು ಹೊನವಾಡ ಮಾತನಾಡಿ, ನರೇಗಲ್ಲ ಹೋಬಳಿಯಲ್ಲಿ ನಡೆಸಲು ಉದ್ದೇಶಿಸಿರುವ 220ಕೆವಿ ಜೋಡು ಗೋಪುರ ವಿದ್ಯುತ್ ಸ್ಥಾವರ ಸ್ಥಾಪನೆಯನ್ನು ಕೈಬಿಡಬೇಕು. ಈಗಾಗಲೇ ಹೋಬಳಿಯಲ್ಲಿ ಪವನ, ಸೋಲಾರ್ ವಿದ್ಯುತ್ ಯೋಜನೆಗಾಗಿ ಸಾಕಷ್ಟು ಪ್ರಮಾಣದ ಕೃಷಿ ಜಮೀನು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗಿದೆ. ಈಗ ಮತ್ತೆ ಇಟಗಿಯಿಂದ ಡೋಣಿ ವಿದ್ಯುತ್ ಮಾರ್ಗಕ್ಕಾಗಿ ರೈತರ ಫಲವತ್ತಾದ ಜಮೀನಿಗಳಲ್ಲಿ ವಿದ್ಯುತ್ ಗೋಪುರ ನಿರ್ಮಾಣ ಮಾಡುವುದು ಸೂಕ್ತವಲ್ಲ. ಆದ್ದರಿಂದ, ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ, ತಮ್ಮ ನ್ಯಾಯುತವಾದ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ವಿ.ಎಂ. ಪಾಯಪ್ಪಗೌಡ್ರ, ಎಸ್.ಕೆ. ಧರ್ಮಾಯತ, ಎಂ.ವಿ. ಧರ್ಮಾಯತ, ಶಿವಪುತ್ರಪ್ಪ ಸಂಗನಾಳ, ರಂಗಪ್ಪ ನಾಯ್ಕ, ಮಲ್ಲಿಕಾರ್ಜುನ ಮಳ್ಳಿ, ಸಿದ್ದಪ್ಪ ಇಟ್ಟಣ್ಣವರ, ಶರಣಪ್ಪ ಹಕ್ಕಿ, ಅಶೋಕ ಗೇದಗೇರಿ, ಜಗದೀಶ ಹೊನವಾಡ, ಬಸಪ್ಪ ಜೋಗಿ, ಶಿವನಗೌಡ ಕಡದಳ್ಳಿ, ಚನ್ನಬಸಪ್ಪ ಕುಷ್ಟಗಿ, ಕಳಕಪ್ಪ ಹುಯಿಲಗೋಳ, ವಿ.ಎ. ಕುಂಬಾರ, ಎಸ್.ಬಿ. ಜುಟ್ಲ, ಮಲ್ಲಪ್ಪ ಹಕಾರಿ, ಹನಮಪ್ಪ ಬೇಲೇರಿ, ಬಿ.ವಿ. ಲಕ್ಕನಗೌಡ್ರ, ಅಶೋಕ ಬೇವಿನಕಟ್ಟಿ, ಈರಪ್ಪ ಹತ್ತಿಕಟಗಿ, ಪಿಎಸ್ಐ ಐಶ್ವರ್ಯ ನಾಗರಾಳ, ಎಎಸ್ಐ ಶೇಖರ ಹೊಸಳ್ಳಿ ಸೇರಿದಂತೆ ಸಿಬ್ಬಂದಿ ಇದ್ದರು.
ತೊಗರಿ ಬೆಳೆಗಾರರಿಗೆ ತೋರುವ ಕಾಳಜಿಯನ್ನು ಕಡಲೆ ಬೆಳೆಗಾರರಿಗೆ ನೀಡದಿರುವುದು ಖಂಡನೀಯ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಕೇಂದ್ರ ಸರ್ಕಾರದ ಕನಿಷ್ಠ ಮಾರಾಟ ಬೆಲೆಯೊಂದಿಗೆ ರಾಜ್ಯ ಸರ್ಕಾರದ ರೂ.1500 ಹೆಚ್ಚಿಸುವ ಮೂಲಕ ಕಡಲೆ ಬೆಂಬಲ ಬೆಲೆಯನ್ನು ರೂ. 7150ಕ್ಕೆ ಹೆಚ್ಚಿಸಬೇಕು ಎಂದು ರೈತರು ಆಗ್ರಹಿಸಿದರು.