ಫೆ.5ರಿಂದ ಪುಣ್ಯಾರಾಧನೆಯ ಶತಮಾನೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕೋಡಿಕೊಪ್ಪದ ಹಠಯೋಗಿ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವ ಹಾಗೂ ಮಹಾ ರಥೋತ್ಸವದ ಕಾರ್ಯಕ್ರಮಗಳು ಜ.30ರಿಂದ ಪ್ರಾರಂಭವಾಗಲಿದ್ದು, ಫೆಬ್ರುವರಿ 5, 6 ಮತ್ತು 7ರಂದು ಪುಣ್ಯಾರಾಧನೆಯ ಶತಮಾನೋತ್ಸವ ಜರುಗಲಿದೆ ಎಂದು ಟ್ರಸ್ಟ್ ಕಮಿಟಿಯ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಜ. 30ರಿಂದ ಫೆ.5ರವರೆಗೆ ಲೋಕ ಕಲ್ಯಾಣಾರ್ಥವಾಗಿ ರುದ್ರಹೋಮ ಜರುಗುತ್ತದೆ. ಸಂಜೆ 7ಕ್ಕೆ ಶ್ರೀ ವೀರಪ್ಪಜ್ಜನವರ ಜೀವನ ದರ್ಶನ ಪುರಾಣ ಪ್ರಾರಂಭವಾಗಲಿದ್ದು, ರೋಣ ಬೂದೀಶ್ವರ ಮಠದ ಪ.ಪೂ. ಡಾ. ವಿಶ್ವನಾಥ ಸ್ವಾಮಿಗಳು ಪ್ರವಚನ ನುಡಿ ನುಡಿಯಲಿದ್ದಾರೆ. ಚಿಕ್ಕಮನ್ನಾಪುರದ ಹನುಮಂತಕುಮಾರ ಮೇಟಿ ಮತ್ತು ಸಂಗಡಿಗರು ಸಂಗೀತ ಸೇವೆ ಸಲ್ಲಿಸಲಿದ್ದಾರೆ. ಫೆ. 5ರಂದು ಮಧ್ಯಾಹ್ನ 3ಕ್ಕೆ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವದ ಉದ್ಘಾಟನೆ ನಡೆಯಲಿದೆ.

ಫೆ. 6ರಂದು ಮಹಾಗಣಾರಾಧನೆ ಜರುಗಲಿದೆ. ಬೆಳಿಗ್ಗೆ 10ಕ್ಕೆ 5 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಜರುಗಲಿದೆ. ಫೆ.7ರಂದು ಬೆಳಿಗ್ಗೆ 11ಕ್ಕೆ ಪುಣ್ಯಾರಾಧನೆ ಶತಮಾನೋತ್ಸವದ ಮಹಾಮಂಗಲ ಮತ್ತು ಪುರಾಣ ಮಂಗಲೋತ್ಸವ ಜರುಗಲಿದೆ. ಸಂಜೆ 5ಕ್ಕೆ ಶ್ರೀ ವೀರಪ್ಪಜ್ಜನವರ ಮಹಾರಥೋತ್ಸವ ಜರುಗಲಿದೆ. ಫೆ. 8ರಂದು ಸಂಜೆ 6ಕ್ಕೆ ಲಘುರಥೋತ್ಸವ ನೆರವೇರುವುದು.

ಪುರಾಣದ ಉದ್ಘಾಟನೆಯನ್ನು ಮುಂಡರಗಿಯ ನಾಡೋಜ ಶ್ರೀ ಅನ್ನದಾನ ಮಹಾಸ್ವಾಮಿಗಳು ನೆರವೇರಿಸಲಿದ್ದು, ಪುಣ್ಯಾರಾಧನೆಯ ಶತಮಾನೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕಾನೂನು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಶಾಸಕ ಜಿ.ಎಸ್. ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮಂಗಲೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಕೆ.ಜಿ. ಬಂಡಿ, ಹಾಲಪ್ಪ ಆಚಾರ್, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಧುರೀಣ ರವಿ ದಂಡಿನ, ಪ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಅನೇಕ ರಾಜಕೀಯ ಮುಖಂಡರು ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ವೀರಪ್ಪಜ್ಜನವರ ಭಕ್ತರೆಲ್ಲರೂ ಈ ಮಹಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಡಾ. ಚಪ್ಪನ್ನಮಠ ಮತ್ತು ಟ್ರಸ್ಟ್ ಕಮಿಟಿಯ ಸದಸ್ಯರು ವಿನಂತಿಸಿದ್ದಾರೆ.

ಒಟ್ಟು 10 ದಿನಗಳವರೆಗೆ ನಡೆಯಲಿರುವ ಈ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ನಿಡಗುಂದಿಕೊಪ್ಪ ಶ್ರೀಗಳು, ನಂದಿವೇರಿಮಠ ಶ್ರೀಗಳು, ಗುಲಗಂಜಿ ಮಠದ ಶ್ರೀಗಳು, ನರೇಗಲ್ಲ ಹಿರೇಮಠದ ಶ್ರೀಗಳು, ಹಂಪಸಾಗರದ ಶ್ರೀಗಳು, ಹೆಬ್ಬಳ್ಳಿಯ ಮಹಾರಾಜರು, ಮಣಕವಾಡದ ಶ್ರೀಗಳು, ದರಗಾದ ಶರಣರು, ಅಬ್ಬಿಗೇರಿ ಹಿರೇಮಠದ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ಮಠದ ಶ್ರೀಗಳು ಸೇರಿದಂತೆ ನಾಡಿನ ಪ್ರಮುಖ ಮಠಗಳ 25ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.


Spread the love

LEAVE A REPLY

Please enter your comment!
Please enter your name here