ಕೈಲಾಸ ಆಶ್ರಮದಿಂದ ಭಕ್ತರ ಬದುಕಿನಲ್ಲಿ ಬದಲಾವಣೆ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಾವಿಂದು ಹುಲಕೋಟಿಯ ಪುಣ್ಯಭೂಮಿಯಲ್ಲಿ ಸೇರಿದ್ದೇವೆ. ಶ್ರೀ ತಿರುಚ್ಚಿ ಮಹಾಸ್ವಾಮಿಜಿಗಳಿಂದ ಸ್ಥಾಪನೆಯಾದ ಕೈಲಾಸ ಆಶ್ರಮದಿಂದ ಭಕ್ತರ ಬದುಕಿನಲ್ಲಿ ಬದಲಾವಣೆ ಆಗಿದೆ. ಪೂಜ್ಯರು ಹಾಕಿಕೊಟ್ಟ ಪರಂಪರೆ, ಆಚರಣೆಗಳನ್ನು ನಾವು ಪಾಲಿಸಿಕೊಂಡು ಹೋಗುತ್ತಿದ್ದು, ಪ್ರಸಕ್ತ ಕೈಲಾಸ ಆಶ್ರಮದ ಆಚಾರ್ಯ ಜಗದ್ಗುರು ಜಯೇಂದ್ರಪುರಿ ಸ್ವಾಮಿಗಳು ಪ್ರತಿ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ತಿರುಚ್ಚಿ ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ತಾಲೂಕಿನ ಹುಲಕೋಟಿ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದ ತಿರುಚ್ಚಿ ಮಹಾಸ್ವಾಮಿಗಳ 33ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರ ಆರ್ಥಿಕ ಬದುಕು ಇಂದು ಸುಧಾರಣೆ ಆಗುತ್ತಿದೆ. ಆದರೆ, ಪ್ರೀತಿ, ಅನುರಾಗ, ಅನುಕಂಪಗಳು ಕುಸಿಯುತ್ತಿದ್ದು, ಭಕ್ತರು ಮಾನವಿಯತೆ ಬದುಕಿಗೆ ಒತ್ತು ಕೊಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಮಾತನಾಡಿ, ಸಾಧು-ಸನ್ಯಾಸಿಗಳು, ಬ್ರಹ್ಮಚಾರಿಗಳಿಂದ ನಮ್ಮ ದೇಶದಲ್ಲಿ ಇನ್ನೂ ಆಧ್ಯಾತ್ಮಿಕತೆ ಉಳಿದಿದೆ. ಜೀವನದಲ್ಲಿ ಸಾಧನೆ ಅಗತ್ಯವಿದ್ದು, ಅನುಭಾವದಲ್ಲಿ ಕೊರತೆ ಎದ್ದು ಕಾಣುತ್ತಿದೆ. ನುಡಿಗಳು ಇವೆ. ಆದರೆ, ನಡೆಗಳಿಲ್ಲ. ಅತೀಂದ್ರಿಯ ಜ್ಞಾನ ಮತ್ತು ಅನುಭಾವದ ಮೇಲೆ ನಮ್ಮ ದೇಶದ ಆಧ್ಯಾತ್ಮಿಕತೆ ನಿಂತಿದೆ. ಇಂದ್ರಿಯಾತೀತ ಅಧ್ಯಯನವನ್ನು ಪ್ರತಿಯೊಬ್ಬರೂ ಮಾಡಬೇಕು. ರೂಪ, ರಸ, ಗಂಧ, ಶಕ್ತಗಳನ್ನು ಅನುಭವಿಸುತ್ತೇವೆ. ಆದರೆ, ಇಂದ್ರಿಯಾತೀತ ಆತ್ಮವನ್ನು ಯಾರೂ ಅನುಭವಿಸಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮವನ್ನುದ್ದೇಶಿಸಿ ಪೂರ್ಣಾನಂದ ಪುರಿ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿನ ಅಶಾಂತಿಗೆ ಸಂಸ್ಕಾರದ ಕೊರತೆ ಮೂಲ ಕಾರಣವಾಗಿದೆ. ತ್ರೇತಾಯುಗದಲ್ಲಿ ರಾಮ, ಲಕ್ಷ್ಮಣ, ಶತ್ರುಘ್ನರ ಕಾಲದಲ್ಲಿ ಅಣ್ಣನಿಗಾಗಿ ತ್ಯಾಗ ಮಾಡುತ್ತಿದ್ದರು. ಈ ಕಲಿಯುಗದಲ್ಲಿ ತಮ್ಮನ ಏಳಿಗೆಗಾಗಿ ಅಣ್ಣ ಸಂಪೂರ್ಣ ಅಧಿಕಾರ ತ್ಯಾಗ ಮಾಡಿ ಶ್ರಮಿಸುತ್ತಿದಾರೆಂದು ಡಿ.ಆರ್. ಪಾಟೀಲ ಹಾಗೂ ಹೆಚ್.ಕೆ. ಪಾಟೀಲರ ಸಹೋದರತ್ವದ ಬಗ್ಗೆ ಗುಣಗಾನ ಮಾಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕೈಲಾಸ ಆಶ್ರಮದ ಆಚಾರ್ಯ ಜಗದ್ಗುರು ಜಯೇಂದ್ರಪುರಿ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಈ ವೇಳೆ ಶಿವಾನಂದ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ, ಶಿರಹಟ್ಟಿ ಮಠದ ಜಗದ್ಗುರು ಫಕ್ಕಿರೇಶ್ವರ ಮಹಾಸ್ವಾಮೀಜಿ, ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ, ಬೆಂಗಳೂರಿನ ನರೇಂದ್ರ ಪ್ರೊ. ಶಿವರಾಜ್, ಹಾಸನದ ಪುಟ್ಟೇಗೌಡ್ರ, ಮಾಜಿ ಶಾಸಕ ಡಿ.ಆರ್ ಪಾಟೀಲ, ಜಿ.ಎಸ್ ಗಡ್ಡದೇವರಮಠ, ರಾಮಣ್ಣ ಲಮಾಣಿ ಉಪಸ್ಥಿತರಿದ್ದರು.

23 ವರ್ಷಗಳ ಕಾಲ ಕಾರ್ಯಾಂಗದ ಭಾಗವಾಗಿ ಕೆಲಸ ಮಾಡಿದ್ದೇನೆ. ಕೆಲವು ರಾಜಕಾರಣಿಗಳ ಜೊತೆ ಸಂಘರ್ಷಕ್ಕೂ ಇಳಿದಿದ್ದೇನೆ. ಆದರೆ, ಎಲ್ಲವೂ ನಶ್ವರ ಎಂದರಿತು ಜಂಜಾಟದಿಂದ ದೂರ ಉಳಿದು ಸನ್ಯಾಸತ್ವ ಸ್ವೀಕರಿಸಿ, ಸಮಾಜ ಸುಧಾರಣೆಯಲ್ಲಿ ಚಿಕ್ಕ ಸೇವೆ ಸಲ್ಲಿಸುತ್ತಿದ್ದೇನೆ. ಸಮಾಜವನನ್ನು ಸರಿ ದಾರಿಗೆ ತರಲು, ಸನಾತನ ಸಂಸ್ಕೃತಿ ಉಳಿಯಲು 33 ವರ್ಷಗಳ ಹಿಂದೆ ತಿರುಚ್ಚಿ ಸ್ವಾಮೀಜಿಗಳು ಶ್ರಮಿಸಿದ್ದರು ಎನ್ನುವುದು ಹೆಮ್ಮೆಯ ವಿಷಯವಾಗಿದೆ.

– ಶ್ರೀ ನಿಶ್ಚಿದಾನಂದ ಸ್ವಾಮೀಜಿ.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ.


Spread the love

LEAVE A REPLY

Please enter your comment!
Please enter your name here