ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಹದಿನೈದು ದಿನಗಳಿಂದ ತಾಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಯನ್ವಯ ನಿಗಾದಲ್ಲಿಟ್ಟಿದ್ದ ಧರ್ಮ ಮತ್ತು ಅರ್ಜುನ ಎಂಬ ಅವಳಿ ಜವಳಿ ಜೋಡಿ ಸಿಂಹಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅರಣ್ಯ ಇಲಾಖೆ ಬುಧವಾರ ಏಪ್ರಿಲ್ 7 ರಿಂದ ಅವಕಾಶ ಕಲ್ಪಿಸಿದ್ದು, ಪ್ರಾಣಿ ಪ್ರೀಯರಲ್ಲಿ ಸಂತಸ ಹೆಚ್ಚಿಸಿದೆ.
ಕೇಂದ್ರ ಮೃಗಾಲಯ ಪ್ರಾಧಿಕಾರವು ಬಿಂಕದಕಟ್ಟಿ ಮೃಗಾಲಯಕ್ಕೆ ಜೋಡಿ ಸಿಂಹಗಳ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ 11 ವರ್ಷಗಳ ಧರ್ಮ ಮತ್ತು ಅರ್ಜುನ ಎಂಬ ಹೆಸರಿನ ಎರಡು ಗಂಡು ಸಿಂಹಗಳನ್ನು ಮಾ.20ರಂದು ಮೃಗಾಲಯಕ್ಕೆ ತರಲಾಗಿತ್ತು. ಬಯಲು ಸೀಮೆಯ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೆ ಇವೆರಡನ್ನೂ ನಿಗಾದಲ್ಲಿರಸಲಾಗಿತ್ತು.
ಸದ್ಯ ಸಿಂಹಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದು, ಸದ್ಯ ಮೃಗಾಲಯದಲ್ಲಿ ನೈಸರ್ಗಿಕ ವಾಸಸ್ಥಾನದ ಮಾದರಿಯಲ್ಲೇ ನಿರ್ಮಿಸಲಾಗಿರುವ ಪಂಜರದಲ್ಲಿ ವಾಸಿಸಲಿವೆ. ಸಿಂಹಗಳು ಸ್ವಚ್ಛಂದವಾಗಿ ವಿಹರಿಸಲು 1,000 ಚ.ಮೀ. ಮೀಸಲಿಟ್ಟಿರುವ ಪಂಜರದಲ್ಲಿ ವಾತಾವರಣ ನಿರ್ಮಿಸಿದ್ದಾರೆ. ಅದರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನೀರಿನ ಹೊಂಡ, ಕಲ್ಲಿನ ಬಂಡೆಗಳು, ಗಿಡ-ಮರಗಳಿರುವಂತೆ ವಿನ್ಯಾಸಗೊಳಿಸಿದ್ದಾರೆ. ಸಿಂಹಗಳ ವೀಕ್ಷಣೆಗೆ ಗಾಜಿನ ಪರದೆಯ ವ್ಯವಸ್ಥೆ ಮಾಡಿದ್ದು, ಪ್ರವಾಸಿಗರು ಯಾವುದೇ ತಂತಿ ಬೇಲಿಯ ಅಡೆತಡೆಗಳಿಲ್ಲದೇ ಸಿಂಹಗಳನ್ನು ವೀಕ್ಷಿಸಬಹುದು ಎಂದು ಡಿಸಿಎಫ್ ಸೂರ್ಯಸೇನ್ ಎ ವಿ ತಿಳಿಸಿದ್ದಾರೆ.