ವರ್ಷವಾರು ಮಾಹಿತಿ ದಾಖಲಿಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚನೆ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಶುಕ್ರವಾರ ಬೆಳಿಗ್ಗೆ ನಗರದ ಗಾಂಧಿ ಭವನ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಗಾಂಧಿ ಭವನ ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಧಾರವಾಡ ರೈತ ಸಂಪರ್ಕ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳ ಹಾಜರಾತಿ, ಕೇಂದ್ರದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.

Advertisement

ಜಿಲ್ಲಾಧಿಕಾರಿಗಳು ಆಗಮನದ ಅಂದಾಜು ಇಲ್ಲದೆ, ಇದ್ದ ಅಧಿಕಾರಿಗಳಿಗೆ, ಅವರ ಆಗಮನ ಸಿಬ್ಬಂದಿಗಳಲ್ಲಿ ಆಶ್ಚರ್ಯ, ಸ್ವಲ್ಪ ಗೊಂದಲ ಮೂಡಿಸಿತು. ಕೇಂದ್ರಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಯಾರಪ್ಪ ಇದ್ದೀರಿ, ಏನ್ ಕೆಲಸ ಮಾಡುತ್ತಿದ್ದಿರಿ, ರೈತರು ಬರತ್ತಾರಾ, ಏನು ಎಂದು ಅಧಿಕಾರಿಗಳ ವಿಚಾರಣೆ ಆರಂಭಿಸಿದರು.

ಸ್ಥಳದಲ್ಲಿ ಹಾಜರಿದ್ದ ಕೃಷಿ ಅಧಿಕಾರಿ ಮಹಾದೇವ ಸರಶೆಟ್ಟಿ ಕೇಂದ್ರದ ಕಾರ್ಯ ಚಟುವಟಿಗಳನ್ನು ವಿವರಿಸಿದರು. ಧಾರವಾಡ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಗೆ 11 ಗ್ರಾಮ ಪಂಚಾಯಿತಿಗಳು, 59 ಗ್ರಾಮಗಳು ಬರುತ್ತವೆ. ಅಂದಾಜು 11 ಸಾವಿರ ರೈತರಿದ್ದು, ಅವರಿಗೆ ಇಲಾಖೆ ಸೇವೆಗಳನ್ನು ನಿಯಮಿತವಾಗಿ ಹಂಗಾಮವಾರು ತಲುಪಿಸುತ್ತಿದ್ದೇವೆ ಎಂದು ಹೇಳಿದರು.

ಆರ್.ಎಸ್.ಕೆಗೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ ಔಷಧಿ, ಬೀಜ, ಗೋಬ್ಬರ, ಕಳೆನಾಶಕ, ಬೆಳೆ ಟಾನಿಕ್, ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಕೀ ಹಾಕಿದ್ದ ಗೋದಾಮು ಗಮನಿಸಿ, ಸಿಬ್ಬಂದಿ ಕೀ ತರುವವರೆಗೆ ಕಾಯ್ದು, ಅದನ್ನು ತೆರೆಯಿಸಿ ದಾಸ್ತಾನು ಪರಿಶೀಲಿಸಿದರು.

ಗೋದಾಮುವಿನಲ್ಲಿದ್ದ ಸಣ್ಣ ಮತ್ತು ಅತಿ ಸಣ್ಣ ರೈತರು ಕಳೆ ತೆಗೆಯಲು ಬಳಸಬಹುದಾದ ಸೈಕಲ್ ವೀಡರ್‌ಗಳ ಕುರಿತು, ಎತ್ತು ಚಾಲಿತ ಎಡೆಕುಂಟೆಗಳ ಸಾಕಷ್ಟು ದಾಸ್ತಾನು ಇರುವದನ್ನು ಮಾಹಿತಿ ಪಡೆದರು. ರೈತರಿಗೆ ರಿಯಾಯಿತಿ ದರದಲ್ಲಿ ದರದಲ್ಲಿ ಯಾಂತ್ರೀಕರಣ ಯೋಜನೆಯಡಿ ವಿತರಿಸುತ್ತಿರುವ ಹೈಟೆಕ್ ಯಂತ್ರೋಪಕರಣಗಳ ಕುರಿತು ಮಾಹಿತಿ ಪಡೆದರಲ್ಲದೆ, ಕೂರಿಗೆ ರೊಟೊವೇಟರ್, ಎಂ.ಬಿ. ಪ್ಲೋ ಹಾಗೂ ಪವರ್ ವೀಡರ್‌ಗಳ ವಿತರಣಾ ವಹಿಯನ್ನು ಪರಿಶೀಲಿಸಿದರು.

ಕಚೇರಿಯಲ್ಲಿ ನಿರ್ವಹಿಸುವ ವಿವಿಧ ಕಡತಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಫಲಾನುಭವಿಗಳ ಮಾಹಿತಿ ಅನುಕ್ರಮವಾಗಿ ಇರದ ಮತ್ತು ಸರಿಯಾಗಿ ದಾಖಲಿಸದಿರುವದನ್ನು ಗಮನಿಸಿ, ಸರಿಯಾಗಿ ವರ್ಷವಾರು ಮಾಹಿತಿ ದಾಖಲಿಸುವಂತೆ ಎಚ್ಚರಿಕೆ ನೀಡಿದರು.

ರೈತ ಸಂಪರ್ಕ ಕೇಂದ್ರವು ಕೃಷಿ ಇಲಾಖೆಯ ಕ್ಷೇತ್ರಮಟ್ಟದ ಕಚೇರಿ ಆಗಿದೆ. ನಿತ್ಯ ನೂರಾರು ರೈತರು ಕೇಂದ್ರಕ್ಕೆ ಬರುತ್ತಾರೆ. ಅವರ ಬೇಡಿಕೆಗಳನ್ನು ದಾಖಲಿಸಬೇಕು ಮತ್ತು ಅವರ ಕುಂದುಕೊರತೆಗಳನ್ನು ಆಲಿಸಿ, ದಾಖಲಿಸಬೇಕು. ಇದರಿಂದ ರೈತರ, ಕೃಷಿ ವಲಯದ ಸಮಸ್ಯೆಗಳನ್ನು ಮೂಲದಲ್ಲಿ ಗುರುತಿಸಿ, ಜಿಲ್ಲಾ ಮಟ್ಟದಲ್ಲಿ ಪರಿಹಾರಕ್ಕೆ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಫೆಬ್ರವರಿ 1ರಿಂದ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಬೇಡಿಕೆ ವಹಿ ಮತ್ತು ರೈತರ ಕುಂದುಕೊರತೆ ವಹಿಗಳನ್ನು ಪ್ರತ್ಯೇಕವಾಗಿ ಕಡ್ಡಾಯವಾಗಿ ನಿರ್ವಹಿಸಬೇಕು. ಕೃಷಿ ಇಲಾಖೆ ಜಂಟಿ ನಿರ್ದೇಶಕರು ಈ ಕುರಿತು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಇಂದೇ ನಿರ್ದೇಶನ ನೀಡಬೇಕು ಎಂದರು.

ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿದ್ದ ಮುಗದ, ಮಂಡಿಹಾಳ, ಸಣ್ಣ ಸೋಮಾಪುರ ರೈತರನ್ನು ಮಾತನಾಡಿಸಿ, ಜಿಲ್ಲಾಧಿಕಾರಿಗಳು ರೈತ ಸಂಪರ್ಕ ಕೇಂದ್ರದ ಅನುಕೂಲತೆ ಹಾಗೂ ಅವರ ದೂರುಗಳ ಕುರಿತು ವಿಚಾರಿಸಿದರು. ರೈತ ಸಂಪರ್ಕ ಕೇಂದ್ರಗಳಲ್ಲಿರುವ ಸಿಬ್ಬಂದಿ ಕೊರತೆ ಇರುವದನ್ನು ಗಮನಿಸಿ, ಸರಕಾರದ ಗಮನಕ್ಕೆ ತರುವವದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ರೈತರು, ಸಿಬ್ಬಂದಿಗಳು ಹಾಜರಿದ್ದರು.

ಜಿಲ್ಲೆಯ ವಿವಿಧ ತಾಲೂಕುಗಳ ಪ್ರವಾಸ ಸಂದರ್ಭದಲ್ಲಿ ಅಲ್ಲಿನ ರೈತ ಸಂಪರ್ಕ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ವಹಿಗಳನ್ನು, ಗೋದಾಮ ದಾಸ್ತಾನು ಪರಿಶೀಲಿಸುತ್ತೇನೆ ಮತ್ತು ರೈತರನ್ನು ಮಾತಾಡಿಸಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳ ಹಾಜರಾತಿ, ರೈತರೊಂದಿಗಿನ ಸ್ಪಂದನೆ ಮತ್ತು ಇಲಾಖೆ ಕಾರ್ಯಕ್ರಮ, ಯೋಜನೆಗಳು ಅರ್ಹರಿಗೆ ತಲುಪಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಎಲ್ಲರಿಗೂ ಕಚೇರಿ ಸಮಯದಲ್ಲಿ ಸರಿಯಾಗಿ ಹಾಜರಿದ್ದು, ನಿಯಯಮಾನುಸಾರ ಕರ್ತವ್ಯ ನಿರ್ವಹಿಸಲು ತಿಳಿಸಿ ಎಂದು ಕೃಷಿ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.


Spread the love

LEAVE A REPLY

Please enter your comment!
Please enter your name here