ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಸಿದ್ಧಾರೂಢರ 190ನೇ ಜಯಂತಿ, ಶ್ರೀ ಗುರುನಾಥಾರೂಢರ 115ನೇ ಜಯಂತಿ ಹಾಗೂ ಶ್ರೀ `ಸಿದ್ಧಾರೂಢ ಕಥಾಮೃತ’ ಗ್ರಂಥದ ಶತಮಾನೋತ್ಸವದ ನಿಮಿತ್ತ ಸಂಚರಿಸುತ್ತಿರುವ ಜ.ಶ್ರೀ ಸಿದ್ಧಾರೂಢ ಜ್ಯೋತಿ ರಥಯಾತ್ರೆ ಫೆ. 5ರಂದು ಗದಗ ನಗರಕ್ಕೆ ಆಗಮಿಸಲಿದೆ ಎಂದು ಮಾಜಿ ಶಾಸಕ ಹಾಗೂ ಶ್ರೀಮಠದ ಟ್ರಸ್ಟಿನ ಗೌರವಾಧ್ಯಕ್ಷ ಡಿ.ಆರ್. ಪಾಟೀಲ ತಿಳಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಿದ್ಧಾರೂಢರ ಜನ್ಮಸ್ಥಳ ಚಳಕಾಪುರದಿಂದ 2024 ಡಿಸೆಂಬರ್ 12ರಿಂದ ಜ್ಯೋತಿ ಯಾತ್ರೆ ಆರಂಭವಾಗಿದೆ. ಕರ್ನಾಟಕ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರದಲ್ಲೂ ಸಂಚರಿಸಿದೆ. ಸದ್ಯ ಫೆ. 4ರಂದ ಹುಲಕೋಟಿ ಹಾಗೂ ಫೆ. 5ರಂದು ಸಂಜೆ 5 ಗಂಟೆಗೆ ತೋಂಟದಾರ್ಯ ಮಠದ ಆವರಣಕ್ಕೆ ಆಗಮಿಸಲಿದೆ ಎಂದರು.
ಸಿದ್ಧಾರೂಢರ ಜ್ಯೋತಿ ಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ನೀಲಮ್ಮತಾಯಿ ಆಶ್ರಮದಿಂದ ಶಿವಾನಂದ ಮಠದ ವರೆಗೆ ಸಾಗಲಿದೆ. ಅಲ್ಲಿ ಅಭಿನವ ಶಿವಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಸತ್ಸಂಗ ನಡೆಯಲಿದೆ. ಫೆ. 6ರಂದು ಜ್ಯೋತಿ ಯಾತ್ರೆ ಹಂಪಿಗೆ ಪ್ರಯಾಣ ಬೆಳೆಸಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಪ್ರತಿಪಕ್ಷ ನಾಯಕ ಎಲ್.ಡಿ. ಚಂದಾವರಿ, ಕಾಂಗ್ರೆಸ್ ಮುಖಂಡರಾದ ಗುರಣ್ಣ ಬಳಗಾನೂರ, ಜೆ.ಕೆ. ಜಮಾದಾರ, ಅಶೋಕ ಮಂದಾಲಿ ಮುಂತಾದವರು ಉಪಸ್ಥಿತರಿದ್ದರು.
ಗದುಗಿನ ಶಿವಾನಂದ ಮಹಾಸ್ವಾಮಿಗಳು ಮತ್ತು ಹುಬ್ಬಳ್ಳಿಯ ಸಿದ್ಧಾರೂಢರು ಅದ್ವೈತ ಸಿದ್ಧಾಂತವನ್ನು ಬೋಧಿಸಿದರು. ಹೀಗಾಗಿ ಅವರ ಪಾದಸ್ಪರ್ಶವಾದ ಜಾಗದಲ್ಲಿ ಕೋಮು ಸೌಹಾರ್ದತೆ ಮನೆ ಮಾಡಿದೆ. ಕೇವಲ ಹಿಂದೂ-ಮುಸ್ಲಿಂ ಅಷ್ಟೇ ಅಲ್ಲದೆ, ಬ್ರಾಹ್ಮಣರಿಂದ ಹರಿಜನರವರೆಗೂ ಸಿದ್ಧಾರೂಢರಿಗೆ ಭಕ್ತರಿದ್ದಾರೆ. ಈ ಪರಂಪರೆ ಮುಂದುವರೆಯಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಈ ನಿಟ್ಟಿನಲ್ಲಿ ಸಿದ್ಧಾರೂಢರ ಜ್ಯೋತಿ ರಥಯಾತ್ರೆ ಸರ್ವಧರ್ಮಗಳ ಭಕ್ತರನ್ನು ಒಳಗೊಂಡಿದೆ ಎಂದು ತಿಳಿಸಿದರು.