ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಕಪಕ್ಷೀಯವಾಗಿ ಮಣಿಸಿದ ಭಾರತ ತಂಡವು ಸತತ ಎರಡನೇ ಬಾರಿಗೆ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಬೀಗಿದೆ.
ಟೂರ್ನಿಯಲ್ಲಿ ದಕ್ಷಿಣಾ ಆಫ್ರಿಕಾ ಹಾಗೂ ಭಾರತ ಅಜೇಯ ತಂಡಗಳಾಗಿ ಫೈನಲ್ ಪ್ರವೇಶ ಮಾಡಿದ್ದವು. ಅಂತಿಮ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ದ. ಆಫ್ರಿಕಾ ಭಾರತೀಯರ ಬೌಲಿಂಗ್ ದಾಳಿಗೆ ತತ್ತರಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದ. ಆಫ್ರಿಕಾದ ಆಟಗಾರರು ನಿರೀಕ್ಷೆಗೆ ತಕ್ಕ ಬ್ಯಾಟ್ ಬೀಸುವಲ್ಲಿ ವಿಫಲರಾದರು. ಬ್ಯಾಟರ್ ಗಳು ಗೊಂಗಡಿ ತ್ರಿಷಾ, ವೈಷ್ಣವಿ ಶರ್ಮಾ, ಆಯುಷಿ ಶುಕ್ಲಾ ಹಾಗೂ ಪರುಣಿಕಾ ಸಿಸೋಡಿಯಾ ಅವರ ಬಿಗು ಬೌಲಿಂಗ್ ದಾಳಿಗೆ ಹೆಚ್ಚು ಕಾಲ ಕ್ರಿಸ್ನಲ್ಲಿ ನಿಲ್ಲದೆ ಪೆವಿಲಿಯನ್ ನತ್ತ ಮುಖ ಮಾಡಿದರು.
ಮೈಕೆ ವ್ಯಾನ್ ವೂರ್ಸ್ಟ್ ದಾಖಲಿಸಿದ 23 ರನ್ ಹೊರತುಪಡಿಸಿದರೆ ಆಟಗಾರರು ರನ್ ಗಳಿಸಲು ಪರದಾಡಿದರು. ಒಂದಾದ ಮೇಲೊಂದು ವಿಕೆಟ್ ಒಪ್ಪಿಸಿದರು. 20 ಓವರ್ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡ ದ. ಆಫ್ರಿಕಾ ಕೇವಲ 82 ರನ್ ಪೇರಿಸಿ, ಭಾರತ ತಂಡಕ್ಕೆ ಸುಲಭ ಗುರಿಯನ್ನು ಬಿಟ್ಟುಕೊಟ್ಟಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ, ಆರಂಭದಲ್ಲಿ ಜಿ ಕಮಲಿನಿ ಅವರ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಗೊಂಗಡಿ ತ್ರಿಷಾ (44 ರನ್), ಸಾನಿಕಾ ಚಲ್ಕೆ (26 ರನ್) ಜತೆಗೂಡಿ 11.2 ಓವರ್ನಲ್ಲಿ 84 ರನ್ ಪೇರಿಸಿ ಗೆಲುವಿನ ದಡ ಸೇರಿಸಿದರು