ನವದೆಹಲಿ:- ಬಿಜೆಪಿಯ ದುಷ್ಕೃತ್ಯದ ವಿರುದ್ಧ ಕಾರ್ಯನಿರ್ವಹಿಸಲು ಚುನಾವಣೆ ಆಯೋಗ ವಿಫಲವಾಗಿದೆ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ಮಾಡಿದ್ದಾರೆ.
ಭಾರತೀಯ ಚುನಾವಣಾ ಆಯೋಗವನ್ನು ಗುರಿಯಾಗಿಟ್ಟುಕೊಂಡು ದೆಹಲಿಯಲ್ಲಿ ಮಾತನಾಡಿದ ಅವರು, ದೆಹಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಜಟಾಪಟಿ ದಿನೇ ದಿನೇ ಕಾವೇರುತ್ತಿದೆ. ಚುನಾವಣಾ ಆಯೋಗವು ಬಿಜೆಪಿ ಎದುರು ಶರಣಾಗಿದೆ.
ಬಿಜೆಪಿಯ ದುಷ್ಕೃತ್ಯದ ವಿರುದ್ಧ ಕಾರ್ಯನಿರ್ವಹಿಸಲು ಆಯೋಗ ವಿಫಲವಾಗಿದೆ. ಇದನ್ನೆಲ್ಲಾ ಗಮನಿಸಿದ್ರೆ ಚುನಾವಣಾ ಆಯೋಗ ಅಸ್ತಿತ್ವದಲ್ಲಿಲ್ಲ ಎಂದು ತೋರುತ್ತದೆ. ಇದೊಂದು ರೀತಿಯಲ್ಲಿ ಬಹಳ ದೊಡ್ಡ ಪ್ರಶ್ನೆಯನ್ನ ಹುಟ್ಟುಹಾಕುತ್ತಿದೆ ಅಂದರು.
ಇದೇ ತಿಂಗಳ ಕೊನೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿವೃತ್ತರಾಗುತ್ತಿದ್ದಾರೆ. ನಿವೃತ್ತಿಯ ನಂತರ ಅವರಿಗೆ ರಾಜ್ಯಪಾಲರ ಹುದ್ದೆ, ರಾಷ್ಟ್ರಪತಿ ಹುದ್ದೆ ನೀಡಬಹುದು. ಹೀಗಾಗಿ ನಾನು ರಾಜೀವ್ ಕುಮಾರ್ ಅವರನ್ನ ಕೈಮುಗಿದು ಕೇಳಿಕೊಳ್ಳುತ್ತೇನೆ. ನಿಮ್ಮ ಕರ್ತವ್ಯವನ್ನ ನಿರ್ವಹಿಸಿ ಯಾವುದೇ ಹುದ್ದೆಯ ದುರಾಸೆಯನ್ನ ಬಿಟ್ಟುಬಿಡಿ ಎಂದು ಮನವಿ ಮಾಡಿದ್ರು.