ವಿಜಯಸಾಕ್ಷಿ ಸುದ್ದಿ, ರೋಣ: ಬೊಮ್ಮಸಾಗರ ದುರ್ಗಾದೇವಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ರಿತಿಯ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಸೋಮವಾರ ಸಂಜೆ ಬೊಮ್ಮಸಾಗರ ದುರ್ಗಾದೇವಿ ಸಭಾಂಗಣದಲ್ಲಿ ಜರುಗಿದ ಜಾತ್ರಾ ಮಹೋತ್ಸವದ ನಿಮಿತ್ತ ಕರೆದಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫೆ.11ರಂದು ದೇವಿ ಹೇಳಿಕೆ, ಫೆ.12ರಂದು ಉಡಿ ತುಂಬುವುದು, ಫೆ.13ರಂದು ದೇವಿಯ ರಥೋತ್ಸವ ಜರುಗಲಿದೆ. ದೇವಿಯ ಸಾನ್ನಿಧ್ಯಕ್ಕೆ ಪ್ರತಿ ವರ್ಷದಂತೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಎರಡೂ ತಾಲೂಕಿನ ತಾಲೂಕಾಡಳಿತ ಸ್ಥಳದಲ್ಲಿ ಬಿಡಾರ ಹೂಡಿ ಆಗಮಿಸುವ ಭಕ್ತರಿಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದರು.
ಗ್ರಾಮದ ಸ್ವಚ್ಛತೆಗೆ ಸಂಬಂಧಿಸಿ ಗ್ರಾ.ಪಂ ಹಾಗೂ ತಾ.ಪಂ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಬಾರದು. ಮುಖ್ಯವಾಗಿ ಕುಡಿಯುವ ನೀರಿನ ತೊಂದರೆಯಾಗದಂತೆ ಹಾಗೂ ವಿದ್ಯುತ್ ಕಡಿತವಾಗದಂತೆ ಎಚ್ಚರಿಕೆ ವಹಿಸಬೇಕು. ಬಂದ ಭಕ್ತರಿಗೆ ಸ್ಥಳದಲ್ಲಿ ವೈದ್ಯಕೀಯ ಸೇವೆ ಲಭಿಸಬೇಕು. ಅತಿ ದೊಡ್ಡ ಜಾತ್ರೆಯಿರುವುದರಿಂದ ಶಾಲಾ ಕಟ್ಟಡಗಳಲ್ಲಿ ಆರೋಗ್ಯ ಸೇವೆಯನ್ನು ನಿಡಿ ಎಂದು ತಿಳಿಸಿದರು.
ಸುಗಮ ಸಂಚಾರಕ್ಕೆ ಯಾವುದೇ ರಿತಿಯ ತೊಂದರೆಯಾಗದಂತೆ ನಿಗಾ ವಹಿಸಬೇಕು. ಪಶು ಆರೋಗ್ಯ ಕೇಂದ್ರವನ್ನು ಸಹ ಸ್ಥಾಪಿಸಬೇಕು ಎಂದರು
ಪಿಎಸ್‌ಐ ಪ್ರಕಾಶ ಬಣಕಾರ ಮಾತನಾಡಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಂಡಿದ್ದು, ನಾಲ್ಕು ಕಡೆಗಳಲ್ಲಿ ಭಕ್ತರ ವಾಹನಗಳು ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ವಿವರಿಸಿದರು.
ಜಿ.ಪಂ ಮಾಜಿ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಶರಣಗೌಡ ಪಾಟೀಲ, ಮೋಹನ್ ಹುಲ್ಲಣ್ಣವರ, ಹನ್ಮಂತಪ್ಪ ಹಟ್ಟಿಮನಿ ಸೇರಿದಂತೆ ರೋಣ-ಗಜೇಂದ್ರಗಡ ತಾಲೂಕಿನ ತಹಸೀಲ್ದಾರರು, ತಾ.ಪಂ ಇಒ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.