ವಿಜಯಸಾಕ್ಷಿ ಸುದ್ದಿ, ಗದಗ: ಕಣ್ಣುಗಳನ್ನು ಸಂರಕ್ಷಣೆ ಮಾಡಿಕೊಳ್ಳುವದು ಅವಶ್ಯ ಹಾಗೂ ಅನಿವಾರ್ಯವಾಗಿದೆ ಎಂದು ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಹಿರಿಯ ತಜ್ಞ ವೈದ್ಯರಾದ ಡಾ. ಎ.ಎಸ್ ಗುರುಪ್ರಸಾದ ಹೇಳಿದರು.
ಅವರು ಬೆಟಗೇರಿಯ ಗಾಂಧಿ ನಗರದ ಸರ್ಕಾರಿ ಶಾಲೆ ನಂ. 5ರಲ್ಲಿ ಗದಗ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಹುಬ್ಬಳ್ಳಿಯ ಎಸ್.ಜಿ.ಎಂ. ನೇತ್ರ ಭಂಡಾರ ಹಾಗೂ ಸಂಶೋಧನಾ ಪ್ರತಿಷ್ಠಾನ, ಗೋಧೋಳಿ ಸಂಸ್ಥೆ, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಣ್ಣಿಗೆ ಅಪಾಯವನ್ನುಂಟುಮಾಡುವ ಸನ್ನಿವೇಶಗಳಿಂದ ಸಂರಕ್ಷಿಸಿಕೊಳ್ಳಬೇಕು. ದಾನಗಳಲ್ಲಿ ನೇತ್ರದಾನ ಶ್ರೇಷ್ಠವಾಗಿದೆ. ವ್ಯಕ್ತಿ ಬದುಕಿದ್ದಾಗಲೇ ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿರಬೇಕು ಇಲ್ಲವೆ ಮೃತನ ಕುಟುಂಬದವರ ಒಪ್ಪಿಗೆಯಿಂದ ಕಣ್ಣು ದಾನ ಮಾಡಬಹುದಾಗಿದೆ. ವ್ಯಕ್ತಿಯ ಸಾವಿನ ಬಳಿಕ ಕಣ್ಣುಗಳು ಮಣ್ಣಿನಲ್ಲಿ ಮಣ್ಣು ಆಗದೇ ಅಥವಾ ಅಗ್ನಿಗೆ ಆಹುತಿಯಾಗದೆ ಕಣ್ಣು ದಾನ ಮಾಡಿದರೆ ಆ ಕಣ್ಣಿನಿಂದ ಕಣ್ಣಿಲ್ಲದ ವ್ಯಕ್ತಿ ಜಗತ್ತನ್ನು ನೋಡಬಹುದಾಗಿದೆ ಎಂದರು.
ಸಮಾರಂಭದಲ್ಲಿ ಡಾ. ರಾಜೇಂದ್ರ, ಗೋಧೋಳಿ ಸಂಸ್ಥೆಯ ಅನನ್ಯ ಆಯಾಚಿತ, ಶಾಲಾ ಮುಖ್ಯೋಪಾಧ್ಯಾಯ ಅಶೋಕ ಪತ್ತಾರ, ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ನಿತೀಶ್ ಸಾಲಿ, ದತ್ತು ಬೇವಿನಕಟ್ಟಿ, ರಮೇಶ ಶಿಗ್ಲಿ, ಮೋಹನ ಕಟ್ಟಿಮನಿ, ಕೃಷ್ಣಪ್ಪ ಬಾಗಲಕೋಟಿ, ವೈ.ಜಿ. ಗಡಾದ, ಇಮಾಮಸಾಬ ಹುಲ್ಲೂರ, ಬಸೀರ್, ಬಿ.ಬಾಬು, ಹನಮಂತಪ್ಪ ವೀರಾಪೂರ, ರಾಜು ಚವ್ಹಾಣ, ರಮೇಶ ಗಡಾದ, ಮಂಜುನಾಥ ಬಗಾಡೆ, ಬಾಬು ಕಾಳೆ ಮುಂತಾದವರಿದ್ದರು.
ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಒಟ್ಟು 220 ಜನರಿಗೆ ಕಣ್ಣಿನ ತಪಾಸಣೆ ಮಾಡಲಾಯಿತು. ಇವರಲ್ಲಿ 47 ಜನರನ್ನು ಕಣ್ಣಿನ ಪೊರೆಯ ಉಚಿತ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು ಎಂದು ಸಂಘಟಿಕರು ತಿಳಿಸಿದ್ದಾರೆ.