ಬೆಂಗಳೂರು:- ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟು ಬಂಧಿಸಿರುವ ಘಟನೆ ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ಜರುಗಿದೆ.
ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಕಾಲಿಗೆ ಆನೇಕಲ್ ಉಪವಿಭಾಗದ ಸರ್ಜಾಪುರ ಇನ್ಸ್ಪೆಕ್ಟರ್ ನವೀನ್ ಕುಮಾರ್ ಅವರು ಗುಂಡು ಹಾರಿಸಿದ್ದಾರೆ. ಕಳೆದ 28 ರಂದು ಮಾಜಿ ರೌಡಿ ಶೀಟರ್ ವೆಂಕಟೇಶ್ ಅಲಿಯಾಸ್ ವೆಂಕಿಯ ಪ್ರಾಣ ಮುಗಿಸಿದ ಪ್ರಕರಣದಲ್ಲಿ ಸೀನಾ ಆರೋಪಿ ಆಗಿದ್ದ. ಬಳಿಕ ಖಾಕಿ ಕಣ್ತಪ್ಪಿಸಿ ಓಡಾಡುತ್ತಿದ್ದ.
ಇಂದು ದೊಮ್ಮಸಂದ್ರದ ಬಳಿ ರೌಡಿ ಸೀನಾ ಅವಿತು ಕುಳಿತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ.
ಆಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಕ್ಯಾರೇ ಎನ್ನದ ಆತ, ಪೊಲೀಸ್ ಇರ್ಫಾನ್ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಇನ್ಸ್ಪೆಕ್ಟರ್ ನವೀನ್ ಫೈರಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.