ಹುಬ್ಬಳ್ಳಿ:- ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗುತ್ತಿದ್ದ ಇಬ್ಬರು ಅಂತರರಾಜ್ಯ ದರೋಡೆಕೋರರ ಕಾಲಿಗೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ.
ಆರೋಪಿಗಳಾದ ದಿಲೀಪ್ ಹಾಗೂ ನಿಲೇಶ್ ಕಾಲಿಗೆ ಗುಂಡೇಟು ತಗುಲಿದೆ. ಇವರಿಬ್ಬರು ರಾತ್ರಿ ವೇಳೆ ರಸ್ತೆ ತಡೆದು ದರೋಡೆ ಮಾಡುತ್ತಿದ್ದರು. ಹುಬ್ಬಳ್ಳಿಯ ಮಂಟೂರ ರೋಡ್’ನಲ್ಲಿ ಹಾಗೂ ಗಬ್ಬೊರ ಜೈನ್ ಮಂದಿರ ಹತ್ತಿರ ಬೈಕ್ ತಡೆದು ಸುಲಿಗೆ ಮಾಡಿದ್ದರು. ಅಷ್ಟೇ ಅಲ್ಲದೇ ಮಂಟೂರ ರೋಡ್’ನಲ್ಲಿ ಮನೆ ಮೇಲೆ ಕಲ್ಲು ತೋರಾಟ ಮಾಡಿ ಬಳಿಕ ಮನೆ ದರೋಡೆಗೂ ಯತ್ನಿಸಿದ್ದರು.
ಹೀಗೆ ಹಲವೆಡೆ ಇದೇ ರೀತಿಯ ಕೃತ್ಯ ಎಸಗುತ್ತಿದ್ದರು. ಈ ಸಂಬಂಧ ದೂರು ಆಧರಿಸಿ ಎಚ್ಚೆತ್ತ ಪೊಲೀಸರಿಂದ ಚೆಕ್ ಪೋಸ್ಟ್ ಹಾಕಲಾಗಿತ್ತು. ಅದರಂತೆ ಆರೋಪಿಗಳು ದರೋಡೆಗೆ ಬಂದ ವೇಳೆ ಚೆಕ್ ಪೋಸ್ಟ್ ಸಿಬ್ಬಂದಿಗಳು ಆರೋಪಿಗಳನ್ನು ತಡೆಯಲು ಯತ್ನ ಮಾಡಿದ್ದಾರೆ. ಆದರೆ ಆರೋಪಿಗಳು, ಚೆಕ್ ಪೋಸ್ಟ್ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ಹೋಗಿದ್ದರು.
ಕೂಡಲೇ ಆರೋಪಿಗಳನ್ನ ಬೆನ್ನತ್ತಿ ಹೋದಾಗ ಪೊಲೀಸ್ ಸಿಬ್ಬಂದಿಗಳ ಮೇಲೆ ದರೋಡೆಕೋರರು ಹಲ್ಲೆ ಮಾಡಿದ್ದಾರೆ. ಈ ವೇಳೆ ಮೊದಲು ಶರಣಾಗುವಂತೆ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಕೊನೆಗೂ ಬಗ್ಗದೆ ಎಸ್ಕೇಪ್ ಆಗಲು ಮುಂದಾದಾಗ ಆರೋಪಿಗಳ ಕಾಲಿಗೆ ಪೊಲೀಸರು, ಫೈರಿಂಗ್ ಮಾಡಿ ಬಂಧಿಸಿದ್ದಾರೆ.
ಬಳಿಕ ಬಂಧಿತ ದಿಲೀಪ್ ಹಾಗೂ ನಿಲೇಶ್ ಎಂಬ ಇಬ್ಬರು ಆರೋಪಿಗಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಜೊತೆಗೆ ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳು ಹಾಗೂ ಇಬ್ಬರು ಆರೋಪಿಗಳಿಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.