ಬೆಂಗಳೂರು: ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಿದ್ದ ಬಾಂಗ್ಲಾ ಮೂಲದ ಮಹಿಳೆಯ ಶವ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆ ಬಳಿ ಪತ್ತೆಯಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ ಮುದುಕಪ್ಪ (28) ಬಂಧಿತ ಆರೋಪಿಯಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಜನವರಿ 24ರಂದು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿ ಬಳಿಕ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಸ್ಥಿತಿಯಲ್ಲಿ 28 ವರ್ಷದ ಮಹಿಳೆಯ ಶವ ಪತ್ತೆಯಾಗಿತ್ತು. ಬೆಂಗಳೂರಲ್ಲಿ ವಾಟರ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಮುದುಕಪ್ಪ, ಮಹಿಳೆ ವಾಸವಿದ್ದ ಶೆಡ್ ಹಾಗೂ ಆಕೆ ಕೆಲಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ಗೆ ನೀರು ಪೂರೈಸಲು ಹೋದಾಗ ಆಕೆಯೊಂದಿಗೆ ಮಾತನಾಡುತ್ತಿದ್ದ.
ಜನವರಿ 23ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ್ದ ಮುದುಕಪ್ಪ, ಬಳಿಕ ಆಕೆಯನ್ನ ಕಲ್ಕೆರೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಆಕೆ ಪ್ರತಿರೋಧವೊಡ್ಡಿದಾಗ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಉಸಿರುಗಟ್ಟಿಸಿ ಹತ್ಯೆಗೈದಿದ್ದ. ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದನು. ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್ಎಸ್ಎಲ್ ವರದಿಯನ್ನು ಆಧರಿಸಿ ಆರೋಪಿ ಮುದುಕಪ್ಪನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.