ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ವಿಭಾಗ, ತಂಬಾಕು ನಿಯಂತ್ರಣ ಕೋಶ ಹಾಗೂ ಎಸ್.ಟಿ.ಎಸ್.ಕೆ.ಕೆ ಪಾಲಿಟೆಕ್ನಿಕ್ ಕಾಲೇಜು ಗದಗ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮಂಗಳವಾರ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಡಾ. ಗಣೇಶರಾವ್ ಕುಂದಾಪೂರ ಮಾತನಾಡಿ, ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಪ್ರತಿ ವರ್ಷ ಫೆ.4ರಂದು ಆಚರಿಸಲಾಗುತ್ತಿದ್ದು, ಕ್ಯಾನ್ಸರ್ ಖಾಯಿಲೆಯನ್ನು ಮುನ್ನೆಚ್ಚರಿಕೆ ಮತ್ತು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಮುಖ್ಯವಾಗಿದೆ ಎಂದರು.
ಅಸಾಂಕ್ರಾಮಿಕ ರೋಗಗಳಲ್ಲಿ ಹೃದಯ ಸಂಬಂಧಿತ ಖಾಯಿಲೆಯ ನಂತರದಲ್ಲಿ 2ನೇ ಸ್ಥಾನದಲ್ಲಿ ಕ್ಯಾನ್ಸರ್‌ನಿಂದ ಅತೀ ಹೆಚ್ಚು ಸಾವು ಸಂಭವಿಸುತ್ತಿವೆ. ಕ್ಯಾನ್ಸರ್ ಖಾಯಿಲೆಯು ಅನಿಯಂತ್ರಿತ ಜೀವಕೋಶ ವಿಭಜನೆಗಳಿಂದ ದೇಹದಲ್ಲಿ ಬೆಳವಣಿಗೆಯಾಗುವ ಗಡ್ಡೆಯಾಗಿದೆ. ಕ್ಯಾನ್ಸರ್ ಜೀವಕೋಶವು ಲಿಂಪ್‌ನೋಡ್ಸ್ ಮುಖಾಂತರ ದೇಹದ ಎಲ್ಲಾ ಭಾಗಗಳಲ್ಲಿ ಪಸರಿಸುತ್ತದೆ. ಕ್ಯಾನ್ಸರ್ ರೋಗದಲ್ಲಿ ನಾಲ್ಕು ಹಂತಗಳಿದ್ದು, ಮೊದಲನೇ ಮತ್ತು ಎರಡನೇ ಹಂತದಲ್ಲಿರುವ ಕ್ಯಾನ್ಸರ್ ರೋಗವನ್ನು ತಜ್ಞ ವೈದ್ಯರಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಪಡಿಸಬಹುದೆಂದು ತಿಳಿಸಿದರು.
ಈಗಿನ ಆಧುನಿಕ ಜೀವನ ಶೈಲಿ ಮತ್ತು ತಂಬಾಕು ಸೇವನೆಯಿಂದ ಅತೀ ಹೆಚ್ಚು ಕ್ಯಾನ್ಸರ್ ರೋಗಗಳು ಕಂಡುಬರುತ್ತಿವೆ. ಪುರುಷರಲ್ಲಿ ಬಾಯಿ, ಅನ್ನನಾಳ, ಶ್ವಾಸಕೋಶ ಮತ್ತು ಲೀವರ್ ಕ್ಯಾನ್ಸರ್‌ಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮಹಿಳೆಯರಲ್ಲಿ ಸ್ತನ, ಗರ್ಭಕಂಠ ಮತ್ತು ಅಂಡಾಣುವಿನ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತವೆ. ಕ್ಯಾನ್ಸರ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಆರೈಕೆ ಹಾಗೂ ಮನೋಸ್ಥೈರ್ಯದ ಮಾತುಗಳಿಂದ ಗುಣಪಡಿಸಬಹುದು. ಉತ್ತಮ ಜೀವನ ಶೈಲಿ, ಸಮತೋಲನ ಆಹಾರ, ತರಕಾರಿ ಹಣ್ಣು ಹಂಪಲಗಳ ಸೇವನೆ, ಪ್ರತಿನಿತ್ಯ ಯೋಗ, ಧ್ಯಾನ ಮತ್ತು ದೈಹಿಕ ಚಟುವಟಿಕೆಯಿಂದ ಕ್ಯಾನ್ಸರ್ ಖಾಯಿಲೆ ಬರದಂತೆ ತಡೆಯಬಹುದೆಂದು ತಿಳಿಸಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮಾಧಿಕಾರಿ ಡಾ. ವೆಂಕಟೇಶ ರಾಠೋಡ ಮಾತನಾಡುತ್ತ, ನಮ್ಮ ದೇಶದಲ್ಲಿ ಪ್ರತಿ ವರ್ಷ 14,13,316 ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಅವುಗಳಲ್ಲಿ 30-60 ವಯಸ್ಸಿನವರಲ್ಲಿ 9,16,827 ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ನಿಂದ ಅತೀ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ಕ್ಯಾನ್ಸರ್‌ಗಳಾದ ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನು ಜಿಲ್ಲೆಯ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತಿದ್ದು, 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಎಸ್.ಟಿ.ಎಸ್.ಕೆ.ಕೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಕ್ಯಾನ್ಸರ್ ಖಾಯಿಲೆ ಕುರಿತು ಇಂತಹ ಅಭೂತಪೂರ್ವ ಮಾಹಿತಿ ಹೊಂದಿದ ಕಾರ್ಯಕ್ರಮಗಳು ಎಲ್ಲ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳುವುದು ಅವಶ್ಯಕವಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮೂಲಕ ಮನೆ ಹಾಗೂ ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಲು ಅನುಕೂಲವಾಗುವುದೆಂದು ತಿಳಿಸಿದರು.
ಗಂಗಾ ಸಜ್ಜಗಾರ ಪ್ರಾರ್ಥಿಸಿದರು. ಎಸ್.ಎಸ್. ಪೀರಾ ಕಾರ್ಯಕ್ರಮ ನಿರೂಪಿಸಿದರು. ಮುತ್ತುನಗೌಡ ಎಸ್.ರಬ್ಬನಗೌಡ್ರ ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬ್ಳೆ, ಪುಷ್ಪಾ ಪಾಟೀಲ, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ.ರವಿ ಕಡಗಾವಿ, ಡಾ. ಪ್ರವೀಣ ನಿಡಗುಂದಿ, ಗೋಪಾಲ ಸುರಪುರ, ಪ್ರತೀಕ ಹುರಕಡ್ಲಿ, ವಿರೇಶ ಮದಕಟ್ಟಿ, ರಮೇಶ ಅರಹುಣಸಿ, ಜಿಲ್ಲಾ ಸಮೀಕ್ಷಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಹಾಗೂ ಎಸ್.ಟಿ.ಎಸ್.ಕೆ.ಕೆ. ಪಾಲಿಟೆಕ್ನಿಕ್ ಕಾಲೇಜಿನ ಎಲ್ಲ ಉಪನ್ಯಾಸಕರು, ಆಡಳಿತ ವರ್ಗದವರು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಅಸಾಂಕ್ರಾಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆಯನ್ನು ಪ್ರತೀ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 7 ಎನ್.ಸಿ.ಡಿ. ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧ ವಿತರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು 2025ರ ಒಳಗಾಗಿ ಸುಮಾರು ಶೇ.25 ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಡಾ. ವೆಂಕಟೇಶ ರಾಠೋಡ ತಿಳಿಸಿದರು.