ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಿ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಭೂಮಿ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಹಾಗೂ ಹಕ್ಕುಪತ್ರ ನೀಡಲು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ ಆರೋಪಿಸಿದರು.

Advertisement

ನಗರದ ತಹಸೀಲ್ದಾರರ ಕಚೇರಿಯೆದುರು ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಜಮೀನು ಗ್ರಾಮೀಣ ಜನರ ಉತ್ಪಾದನೆಯ ಏಕೈಕ ಮಾರ್ಗವಾಗಿದೆ. ತಾಲೂಕಿನಲ್ಲಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಿಲ್ಲ. ಅರ್ಜಿ ಸಲ್ಲಿಸಿದವರಿಗೆ ಮನೆ, ನಿವೇಶನ ಹಂಚಿಲ್ಲ. ಸಾಗುವಳಿ ಚೀಟಿಗಳನ್ನು ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದರು.

ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಮಾತನಾಡಿ,

ಬಗರ್ ಹುಕುಂ ಸಾಗುವಳಿದಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅನೇಕ ಬಾರಿ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಎಸಿ ಸೇರಿ ವಿವಿಧ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಗಮನ ಹರಿಸಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ರೈತರನ್ನು ಒಕ್ಕಲೆಬ್ಬಿಸದೇ ಕಾಯ್ದೆಯಡಿ ಪರಿಶೀಲಿಸಿ ಹಕ್ಕುಪತ್ರ, ಸಾಗುವಳಿ ಚೀಟಿ ನೀಡಬೇಕು.

ರಾಜ್ಯದಲ್ಲಿ ಲಕ್ಷಾಂತರ ಮಂದಿ ಸಾಗುವಳಿದಾರರು 3 ತಲೆಮಾರುಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಅದನ್ನು ಸಕ್ರಮಗೊಳಿಸಲು ನಮೂನೆ 50, 53, 57ರಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿದಾರರಿಗೆ ಅರ್ಜಿ ಪರಿಶೀಲಿಸಿ ಸಾಗುವಳಿ ಚೀಟಿ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದರು.

ಈ ವೇಳೆ ತಹಸೀಲ್ದಾರ ಕಿರಣಕುಮಾರ್ ಕುಲಕರ್ಣಿ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಪೀರು ರಾಠೋಡ, ಚೆನ್ನಪ್ಪ ಗುಗಲೋತ್ತರ, ದಾವಲಸಾಬ ತಾಳಿಕೋಟಿ, ಚಂದ್ರು ರಾಠೋಡ, ಮೆಹಬೂಬ್ ಹವಾಲ್ದಾರ್, ಗಣೇಶ ಮಾಳೋತ್ತರ, ರೂಪ್ಲೇಶ ಮಾಳೋತ್ತರ, ವಿರೇಶ ರಾಠೋಡ, ಕುಮಾರ ರಾಠೋಡ, ಶಾಮಿದಸಾಬ ದಿಂಡವಾಡ, ದೀಪಲೇಪ್ಪ ರಾಠೋಡ, ದಿಂಡುರು ಚವಳವ್ವ ರಾಠೋಡ, ಗುಬಾವ್ವ ರಾಠೋಡ, ರೇಣವ್ವ, ಗುಗಳೋತ್ತರ, ಕೃಷ್ಣಪ್ಪ ಮಾಳೋತ್ತರ, ಶಿವಪ್ಪ ಮಾಳೋತ್ತರ ಮುಂತಾದವರಿದ್ದರು.

ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎಂ.ಎಸ್ ಹಡಪದ ಮಾತನಾಡಿ, ತಾಲೂಕಿನ ಜನರು ಬಗರ್ ಹುಕುಂ ಸಾಗುವಳಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಅನೇಕ ವರ್ಷಗಳು ಕಳೆದಿದೆ. ಭೂಮಿ ಮಂಜೂರು ಮಾಡುವಂತೆ ಸರ್ಕಾರಿ ಆದೇಶ ಇದ್ದರೂ, ಭೂಮಿ ಮಂಜೂರು ಮಾಡಿಲ್ಲ. ಪುನಃ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕೊಡಬೇಕು. ಶಾಸಕರ ಅಧ್ಯಕ್ಷತೆಯಲ್ಲಿ ಇರುವ ಭೂ ಮಂಜೂರಾತಿ ಸಮಿತಿಯನ್ನು ತಕ್ಷಣವೇ ಕರೆದು ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here