ಚಿತ್ರದುರ್ಗ:- ಶ್ರೀರಾಮುಲು ನನಗಿಂತ ಹಿರಿಯರು, ಅವರಿಗೆ ಪೈಪೋಟಿ ಕೊಡುವಷ್ಟು ದೊಡ್ಡ ಮನುಷ್ಯ ನಾನಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಮಾಜಿ ಸಚಿವ ಶ್ರೀರಾಮುಲು ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ರಾಮುಲು ನನಗಿಂತ ಹಿರಿಯರಾಗಿದ್ದು, ಬಿಎಸ್ ಯಡಿಯೂರಪ್ಪ, ಅನಂತಕುಮಾರ್ ಹಾಗೂ ಕಾರಜೋಳ ಅವರ ಜೊತೆ ರಾಜ್ಯಾದ್ಯಂತ ಪಕ್ಷಸಂಘಟನೆ ಮಾಡಿದ್ದಾರೆ. ಹೀಗಾಗಿ ರಾಜ್ಯಾದ್ಯಕ್ಷರ ಆಯ್ಕೆ ಬಗ್ಗೆ ಅಂತಿಮವಾಗಿ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಇನ್ನು ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಟ್ಟರೆ ಪಕ್ಷಕ್ಕೆ ಒಳಿತಾಗಲಿದೆ ಎಂದು ವರಿಷ್ಠರು ಗಮನಹರಿಸುತ್ತಾರೆ. ಆದರೆ ಕಳೆದ ಒಂದೂವರೆ ವರ್ಷದಿಂದ ಯಶಸ್ವಿಯಾಗಿ ರಾಜ್ಯಾಧ್ಯಕ್ಷ ಹುದ್ದೆ ಜವಾಬ್ದಾರಿ ನಿರ್ವಹಿಸಿದ್ದೇನೆ. ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಧೈರ್ಯ-ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ರಾಜ್ಯಾಧ್ಯಕ್ಷನಾಗಿ ಮುಂದುವರೆಯುವಂತೆ ಕಾರ್ಯಕರ್ತರ ಅಪೇಕ್ಷೆ ಸಹ ಇದೆ ಎಂದು ಹೇಳಿದರು.
ಸದ್ಯದಲ್ಲೇ ಕೇಂದ್ರದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಜೊತೆಗೆ ರಾಜ್ಯಾಧ್ಯಕ್ಷರ ಆಯ್ಕೆ ವೇಳೆ ಜಿಲ್ಲಾಧ್ಯಕ್ಷರ, ಶಾಸಕರ ಅಭಿಪ್ರಾಯಗಳ ಆಧಾರದ ಮೇಲೆ ಆಯ್ಕೆಯಾಗಲಿದ್ದು, ನಮ್ಮ ಪಕ್ಷ ಹಾಗೂ ಹೈಕಮಾಂಡ್ ಏನು ತೀರ್ಮಾನ ಮಾಡಲಿದೆಯೋ ಆ ತೀರ್ಮಾನಕ್ಕೆ ನಾನಾಗಲಿ, ಮತ್ತೊಬ್ಬರಾಗಲಿ ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸಿದರು.