ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರಶರಣರ ಮಠದಲ್ಲಿ ಚನ್ನವೀರಶರಣರ 30ನೇ ಪುಣ್ಯಸ್ಮರಣೋತ್ಸವ-ಜಾತ್ರಾ ಮಹೋತ್ಸವದ ಅಂಗವಾಗಿ ಶರಣರ ಬೆಳ್ಳಿಮೂರ್ತಿ ಉತ್ಸವ, ಕಡುಬಿನ ಕಾಳಗ, ಹಾಸ್ಯ ಸಂಜೆ, ಸಂಗೀತ ಸುಧೆ ಕಾರ್ಯಕ್ರಮಗಳು ಜರುಗಿದವು. ಶ್ರೀ ಶಿವಶಾಂತವೀರ ಶರಣರು ಸನ್ನಿಧಾನ ವಹಿಸಿ ಶುಭ ಸಂದೇಶ ನೀಡಿದರು.
ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಗಂಗಾವತಿ ನರಸಿಂಹ ಜೋಶಿ ಹಾಗೂ ಬಸವರಾಜ ಮಾಮನಿ ಇವರಿಂದ ಜರುಗಿದ ಹಾಸ್ಯ ಸಂಜೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು. ಶ್ರೀ ಚನ್ನವೀರಶರಣರ ಬೆಳ್ಳಿಮೂರ್ತಿ ಉತ್ಸವವು ಗ್ರಾಮದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು. ಶ್ರೀಮಠದಲ್ಲಿ ಕಡುಬಿನ ಕಾಳಗ ಜರುಗಿತು. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಕೆ. ದೊಡ್ಡಬಸವ ಗವಾಯಿಯವರಿಂದ ಸಂಗೀತ ಸುಧೆ ಜರುಗಿತು.
ಇದೇ ಸಂದರ್ಭದಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಯ ವೃತ್ತಾಧಿಕಾರಿ ಸಿದ್ದರಾಮೇಶ್ವರ ಗಡೇದ ಹಾಗೂ ಪೊಲೀಸ್ ಪೇದೆ ಬಸವರಾಜ ಗುಡ್ನಾನೂರ ಅವರಿಗೆ `ಶರಣಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹುಬ್ಬಳ್ಳಿ ನವನಗರದ ಚನ್ನವೀರಶರಣರ ಅಂಧರ ಕಲ್ಯಾಣ ಆಶ್ರಮದ ಸುನೀಲ ಹಾಗೂ ಮಣಿಕಮಠ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಜರುಗಿತು. ವಿ.ಎಸ್. ಹಿರೇಮಠ, ವಿ.ಬಿ. ಪೊಲೀಸಪಾಟೀಲ, ಶರಣಪ್ಪ ಅಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಶಿವಲಿಂಗಶಾಸ್ತ್ರಿ ಸಿದ್ದಾಪೂರ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಪುರಾಣಿಕಮಠ ಶರಣಶ್ರೀ ಪ್ರಶಸ್ತಿ ವಾಚನ ಮಾಡಿದರು. ಶಿವು ಗಣಾಚಾರಿ ವಂದಿಸಿದರು.