ಬೆಂಗಳೂರು:- ಸೈಬರ್ ವಂಚಕರು ಕಾವೇರಿ 2.0 ಸಾಫ್ಟ್ವೇರ್ನ್ನು ಹ್ಯಾಕ್ ಮಾಡಿದ್ದು, ಸದ್ಯ ಈ ಬಗ್ಗೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆಎ ದಯಾನಂದ್ ದೂರು ನೀಡಿದ್ದಾರೆ.
ದೂರಿನ ಅನ್ವಯ ಕೇಂದ್ರ CEN ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸರ್ವರ್ ಸಮಸ್ಯೆಯಿಂದ ಕೆಲ ದಿನಗಳಿಂದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಸ್ಥಗಿತವಾಗಿತ್ತು. ಹಾಗಾಗಿ ಐಜಿಆರ್ ಕೆಎ ದಯಾನಂದ್, ಪರಿಶೀಲನೆ ಮಾಡಿದಾಗ ಅಪರಿಚಿತರು ಕಾವೇರಿ 2.0 ಸಾಫ್ಟ್ವೇರ್ ಹ್ಯಾಕ್ ಮಾಡಿರುವುದಲ್ಲದೇ, ವೆಬ್ಸೈಟ್ ಪ್ರವೇಶಿಸಿ ದತ್ತಾಂಶ ಕಳವು ಮಾಡಿ ನಕಲಿ ಖಾತೆಗಳನ್ನು ತೆರೆದಿರುವುದು ಪತ್ತೆ ಆಗಿದೆ.
ಸದ್ಯ ಈ ಘಟನೆಯೂ ಸರ್ಕಾರಿ ವ್ಯವಸ್ಥೆಗಳಲ್ಲಿನ ಸೈಬರ್ ಸುರಕ್ಷತೆಯ ದೋಷಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯಗಳನ್ನು ತಡೆಗಟ್ಟಲು ಬಲವಾದ ಕಾನೂನು ಕ್ರಮಗಳ ಅಗತ್ಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ.