ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಾವಯವ ನೈಸರ್ಗಿಕ ಕೃಷಿಗೆ ನಾವಿಂದು ಹೆಚ್ಚಿನ ಒತ್ತು ನೀಡುವ ಮೂಲಕ ಆಕಳು, ಎತ್ತು (ನಂದಿ) ಮೇಕೆ, ಕುರಿಗಳ ಸಮೇತ ಒಕ್ಕಲುತನ ಚಟುವಟಿಕೆಗಳಿಂದ ಭೂಮಿಯ ಹದ ಕಾಪಾಡುವುದಲ್ಲದೆ, ನಮ್ಮ ಸದೃಢ ಆರೋಗ್ಯವನ್ನು ಕಾಯ್ದುಕೊಳ್ಳಬಹುದಾಗಿದೆ ಎಂದು ಕಪೋತಗಿರಿಯ ನಂದಿವೇರಿಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಗದಗ ಒಕ್ಕಲಗೇರಿ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಗೋ ಸೇವಾ ಗತಿವಿಧಿ ಕರ್ನಾಟಕ, ರಾಧ ಸುರಭಿ ಗೋಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಬಂಟ್ವಾಳ, ಗದಗ ಸಂಘಟನೆಯಿಂದ ನಂದಿ ರಥಯಾತ್ರೆಯ ನಿಮಿತ್ತ ಏರ್ಪಡಿಸಿದ್ದ ಜೋಡೆತ್ತಿನ ಕೃಷಿಕರ ಸನ್ಮಾನ, ನಂದಿ ಕೃಷಿ ಆಧಾರಿತ ರೈತರ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಆಧುನಿಕ ಜೀವನ ಶೈಲಿಯಿಂದಾಗಿ ನಾವಿಂದು ಹೈಟೆಕ್ ಜೀವನ ನಡೆಸುತ್ತಿದ್ದೇವೆ. ಸಾಫ್ಟ್ವೇರ್ ಇಂಜಿನಿಯರ್, ಡಾಕ್ಟರ್ ಎಂದು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ದೊಡ್ಡ ದೊಡ್ಡ ಪಟ್ಟಣಗಳಿಗೆ ಕಳುಹಿಸುತ್ತಿದ್ದೇವೆ. ಹೀಗಾಗಿ ಒಕ್ಕಲುತನಕ್ಕೆ ಸಿಗಬಹುದಾದ ಮಹತ್ವ ಸಿಗುತ್ತಿಲ್ಲ. ಒಕ್ಕಲುತನ ಮಾಡುವವರಿಗೆ ಕನ್ಯೆ ಕೊಡಲಾರದ ಪರಿಸ್ಥಿತಿ ಉಂಟಾಗಿದೆ ಎಂದರು.

ಸಂಪತ್ತಿಗೆ ಮಹತ್ವ ಕೊಟ್ಟ ಪರಿಣಾಮವಾಗಿ ಸಂಬಂಧಗಳಿಗೆ ಹಾನಿ ಉಂಟಾಗುತ್ತಿದೆ. ದೂರದ ರಾಜ್ಯ, ವಿದೇಶಗಳಲ್ಲಿರುವ ಮಕ್ಕಳು ಹಣ ಗಳಿಸುತ್ತಿದ್ದಾರೆ. ತಂದೆ-ತಾಯಿ, ಸಂಬಂಧಿಕರ ಸಂಬಂಧಗಳು ದೂರ ಆಗುತ್ತಿವೆ. ಕೃಷಿಯಲ್ಲೂ ಹೊಸತನ, ಆಧುನಿಕ ಕೃಷಿಯಲ್ಲಿ ಸಾಧನೆ ತೋರಿಸಲು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.

ಸಮಾರಂಭದಲ್ಲಿ ಜೋಡೆತ್ತಿನ ಕೃಷಿಕರಾದ ಬಸವರಾಜ ಜಕ್ಕಲಿ, ಫಕ್ಕಣ್ಣ ಯಲಿಗಾರ, ಶೇಖಪ್ಪ ಸಗಣಿ, ಮಹೇಶ ಜಕ್ಕಲಿ, ಮಲ್ಲೀಕಸಾಬ, ಪ್ರಕಾಶ ಕುರುಬರ, ಮಾರುತಿ ಜಕ್ಕಲಿ, ಹುಸೇನಸಾಬ ಢಾಲಾಯತ, ಇಸ್ಮಾಯಿಲ್ ಶರೀಫ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಗೋ ಸೇವಾ ಗತಿವಿಧಿ ಉತ್ತರ ಪ್ರಾಂತ ಪ್ರಶಿಕ್ಷಣ ಟೋಳಿ ಸದಸ್ಯ ರವಿ ಹಡಪದ, ನಂದಿಯಾತ್ರೆಯ ಸಂಘಟಿಕ ಧನುಷ್, ಬಾಬಣ್ಣ ಜಕ್ಕಲಿ, ಶೇಖಪ್ಪ ಹೊಂಬಳ, ಅಶ್ವಿನಿ ಜಗತಾಪ, ನಾಗರತ್ನ ಹಡಪದ ಉಪಸ್ಥಿತರಿದ್ದರು. ರವಿ ಹಡಪದ ನಿರೂಪಿಸಿ ವಂದಿಸಿದರು. ಸಮಾರಂಭದಲ್ಲಿ ಒಕ್ಕಲಗೇರಿಯ ಗಣ್ಯರು ಹಾಗೂ ರೈತರು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ತೋಂಟದಾರ್ಯ ಮಠದಿಂದ ಆರಂಭಗೊಂಡ ನಂದಿ ರಥಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಚೋಟೇಶ್ವರ ದೇವಸ್ಥಾನವನ್ನು ತಲುಪಿತು.

ಕೃಷಿಗೆ ಎತ್ತುಗಳ ಬದಲು ಟ್ರ್ಯಾಕ್ಟರ್ ಬಳಕೆ ಆಗುತ್ತಿದ್ದು, ಇದರಿಂದಾಗಿ ಎತ್ತುಗಳ ಸಂತತಿ ಇಳಿಮುಖವಾಗುತ್ತಿದೆ. ರೈತರು ಎತ್ತುಗಳನ್ನು ಮಾರಾಟ ಮಾಡಬಾರದು. ಎತ್ತುಗಳು ರೈತರ ಬದುಕನ್ನು ಎತ್ತರಿಸಬಲ್ಲವು. ಇಂದು ಮನೆಯಲ್ಲಿ ರೊಟ್ಟಿ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಹೋಟೆಲ್, ಪಿಜ್ಜಾ ಬರ್ಗರ್ ಭರಾಟೆಯಲ್ಲಿ ನಮ್ಮ ಯುವಕರು ಆರೋಗ್ಯಕ್ಕೆ ತೊಂದರೆ ಮಾಡಿಕೊಳ್ಳುತ್ತಿದ್ದಾರೆ. ಇದು ಬದಲಾಗಬೇಕು. ರೊಟ್ಟಿ ಊಟ ಮಾಡಿ ಗಟ್ಟಿಯಾಗಿ ಜಟ್ಟಿಯಂತೆ ಕೆಲಸ ಮಾಡಬೇಕು. ಇದರಿಂದ ಆರೋಗ್ಯವೂ ಸದೃಢಗೊಳ್ಳುವದು ಎಂದು ಶಿವಕುಮಾರ ಮಹಾಸ್ವಾಮಿಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here