HomeInterviewಸಾಮರಸ್ಯ'ದ ತುರ್ತು ಬೆಸುಗೆ ಹಚ್ಚುವ 'ಆಲೈದೇವ್ರು' ಎಂಬ ನಾಟಕವೂ..!

ಸಾಮರಸ್ಯ’ದ ತುರ್ತು ಬೆಸುಗೆ ಹಚ್ಚುವ ‘ಆಲೈದೇವ್ರು’ ಎಂಬ ನಾಟಕವೂ..!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ವಿಶೇಷ

ಉತ್ತರ ಕರ್ನಾಟಕದ ಪ್ರಸಿದ್ದ ಅಲೈ ಕುಣಿತವನ್ನಾಧರಿಸಿದ “ಅಲೈದೇವ್ರು” ಎಂಬ ನಾಟಕವನ್ನು ಬೆಂಗಳೂರಿನ ವಿಶ್ವರಂಗ ಥಿಯೇಟರ್ ತಂಡವು ಮೊನ್ನೆ ರವಿವಾರ ಸಂಜೆ 4.30ಕ್ಕೆ ಮತ್ತು 7.30ಕ್ಕೆ ಬಸವೇಶ್ವರ ಇಂಜಿನಿಯರ್ಸ್ ಅಕಾಡೆಮಿಯ ಕೆಇಎ ಪ್ರಭಾತ ರಂಗಮಂದಿರದಲ್ಲಿ ಪ್ರದರ್ಶಿಸಲು ಮುಂದಾಯಿತು.

ಹನುಮಂತ ಹಾಲಿಗೇರಿಯವರ ರಚನೆಯ ಈ ನಾಟಕವನ್ನು ಸಿದ್ದರಾಮ ಕೊಪ್ಪರ ನಿರ್ದೇಶಿಸುತ್ತಿದ್ದಾರೆ. ಈ ನಾಟಕದಲ್ಲಿ 35ಕ್ಕೂ ಹೆಚ್ಚು ಕಲಾವಿದರು ನಟಿಸಿರುವುದು ವಿಶೇಷವಾಗಿತ್ತು. ಉತ್ತರ ಕರ್ನಾಟಕ ಪ್ರತಿಯೊಂದು ಹಳ್ಳಿಗಳಲ್ಲೂ ನಡೆಯುವ ‘ಜನಪದ’ರ ಹಬ್ಬ ಆಲೈಹಬ್ಬದ ಕುರಿತಾದ ಕಥಾ ಹಂದರವನ್ನು ಈ ನಾಟಕ ಹೊಂದಿದೆ. ಈ ಹಬ್ಬದಲ್ಲಿ ನಡೆಯುವ ಜನಪದ ಅಲೈ ಕುಣಿತ ಮತ್ತು ಅಲೈಪದಗಳನ್ನು ಕಲಾವಿದರು ಎರಡು ತಿಂಗಳು ಅಭ್ಯಾಸ ಮಾಡಿದ್ದಿರು.

ಆಲೈಹಬ್ಬ ಹಿಂದೂ ಮತ್ತು ಮುಸ್ಲಿಂಮರು ಸೇರಿ ಆಚರಿಸುವ ತಲೆಮಾರುಗಳ ಸೌಹಾರ್ದದ ಹಬ್ಬವಾಗಿದೆ. ಜನಪದ ಲಯದ ಕುಣಿತ, ಅಹೋರಾತ್ರಿ ಹಾಡಲ್ಪಡುವ ರಿವಾಯತ್ ಪದಗಳ ಸಾಹಿತ್ಯ, ಹಲಗೆಯ ನಾದದ ಸಂಗೀತ, ಹೀಗೆಯೇ ಹಲವಾರು ಕಲೆಗಳ ಸಂಗಮವಾದ ಗ್ರಾಮೀಣ ಭಾಗದ ಶ್ರಮಿಕ ವರ್ಗದವರಿಂದ ಈ ಹಬ್ಬ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಉತ್ತರ ಕರ್ನಾಟಕದಲ್ಲಿ ಕೆಲವು ಹಳ್ಳಿಗಳಲ್ಲಿ ಮುಸ್ಲಿಂ ಕುಟುಂಬಗಳು ಇರದಿದ್ದರೂ ಕೂಡ ಹಿಂದೂಗಳೇ ಈ ಹಬ್ಬವನ್ನು ತಿಂಗಳಾನುಗಟ್ಟಲೇ ಆಚರಿಸುತ್ತಾರೆ ಕೂಡ.

ಆದರೆ ಇತ್ತೀಚಿಗೆ ಕೆಲವು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಶಾಖೆಗಳು ಹಳ್ಳಿಗಳಲ್ಲೂ ತೆರೆಯಲ್ಪಡುತ್ತಿದ್ದು, ಈ ಶಾಖೆಗಳ ನಂಜಿನ ಕರಿನೆರಳೂ ಶ್ರಾವಣ, ಸಂಕ್ರಾಂತಿ, ಆಲೈಹಬ್ಬದಂತಹ ಗ್ರಾಮೀಣ ಸೊಗಡಿನ ಹಬ್ಬಗಳ ಮೇಲೂ ಆವರಿಸಿ ಹಬ್ಬದ ವಾತಾವರಣ ಮುರುಟುತ್ತಿದೆ. ಮೊದಲೆಲ್ಲ ಹಗಲೆಲ್ಲ ದುಡಿದು ರಾತ್ರಿಯಾಗುತ್ತಿದ್ದಂತೆ, ಶ್ರಾವಣದ ಭಜನಾ ಮ್ಯಾಳಕ್ಕೆ, ಅಲೈಹಬ್ಬದ ಹೆಜ್ಜಿ ಕುಣಿತದ ಅಂಗಳಕ್ಕೆ ಹೋಗುತ್ತಿದ್ದ ಹಳ್ಳಿ ಯುವಕರು ಈಗ ರಾತ್ರಿಯಾಗುತ್ತಿದ್ದಂತೆಯೇ ದಿಲ್ಲಿಯಿಂದ ಹೇರಲ್ಪಡುತ್ತಿರುವ ಏಕ ಸಂಸ್ಕೃತಿಯ ಭೈಟಕ್ ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂಥ ಪಲ್ಲಟಗೊಂಡ ವರ್ತಮಾನಕ್ಕೆ ಕೈಗನ್ನಡಿ ಹಿಡಿಯುವ ಪ್ರಯತ್ನವನ್ನು ಅಲೈದೇವ್ರು ನಾಟಕ ಮಾಡುತ್ತದೆ.

ಬಹುತ್ವದ ಬೇರುಗಳಿರುವ ಹಳ್ಳಿಯೊಂದರಲ್ಲಿ ರೈತರು, ದನಗಾಹಿಗಳು, ಕುರಿಗಾಹಿಗಳನ್ನು ಒಳಗೊಂಡ ಶ್ರಮಿಕವರ್ಗದ ಗುಂಪು ಈ ಆಲೈಹಬ್ಬಕ್ಕಾಗಿ ಹೆಜ್ಜಿ ಕಲಿಯತೊಡಗುತ್ತದೆ. ಓದು ಬರಹ ಗೊತ್ತಿಲ್ಲದ, ಯಾವ ಧರ್ಮದ ನಂಜನ್ನೂ ಮೈಗಂಟಿಸಿಕೊಳ್ಳದ ಜನಪದ ಸಂಸ್ಕೃತಿಯೇ ತಮ್ಮ ಧರ್ಮವೆಂದು ನಂಬಿದವರು ಇವರು. ಇನ್ನೊಂದು ಯುವಕರ ಗುಂಪು ಈ ಹಬ್ಬ ನಮ್ಮ ಧರ್ಮದವರದ್ದಲ್ಲ, ಊರಲ್ಲಿ ಸಾಬಿಗಳ ಹಬ್ಬ ಮಾಡಕ್ಕೆ ನಾವು ಅವಕಾಶ ಕೊಡಲ್ಲ ಎಂದು ಪಣ ತೊಡುತ್ತದೆ. ಅದೇ ಸಮಯದಲ್ಲಿ ಪೇಟೆಯಿಂದ ಬರುವ ಮುಸ್ಲಿಮರ ಗುಂಪು ಕೂಡ ಹನುಮಪ್ಪನ ಜಾತ್ರೆ, ದುರ್ಗವ್ವನ ಜಾತ್ರೆಯಂತೆ ಕುಣಿದು ಕುಪ್ಪಳಿಸುತ್ತಾ ಮಾಡುವ ಈ ಆಲೈಹಬ್ಬ ನಮ್ಮ ಧರ್ಮದಲ್ಲ. ನಮ್ಮ ದೇವರು ನಿರಾಕಾರ. ದಯವಿಟ್ಟು ಈ ಹಬ್ಬ ಮಾಡಬೇಡಿ ಅಂತ ಅವರೂ ವಿರೋಧಿಸುತ್ತಾರೆ. ಹೀಗೆಯೇ ಎರಡೂ ಧರ್ಮಗಳ ಮೂಲಭೂತವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿರುವ ದಿನಗಳಲ್ಲೇ ಹಿಂದೂ ಮತ್ತು ಮುಸ್ಲಿಮ್ ಪ್ರೇಮ ಪ್ರಕರಣ, ಗೋಸಾಗಾಟ ಪ್ರಕರಣಗಳು ನಡೆದು ಉರಿಯೋ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ. ಹೀಗೆಯೇ ಜನರ ಜನಪದ ಹಬ್ಬ ಮತ್ತು ಪ್ರಭುತ್ವದ ಅಸೂಕ್ಷ್ಮಗಳು ಕಲಬೆರಕೆಗೊಂಡು ಊರೆಂಬೋ ಊರು ದಿಕ್ಕುಗಾಣದೇ ಪರದಾಡುವ ವರ್ತಮಾನವನ್ನು ಈ ನಾಟಕ ಪ್ರತಿಬಿಂಬಿಸುತ್ತದೆ.

ಇಂದಿನ ಹಳ್ಳಿಗಳ ವಾಸ್ತವ ಬದುಕನ್ನು ತೆರೆದಿಡುವ ಆಲೈದೇವ್ರು ನಾಟಕ ಈ ಭಾನುವಾರ ಎರಡು ಪ್ರದರ್ಶನಗಳನ್ನು ಕಾಣುತು. ಬುಕ್ ಮೈ ಶೋನಲ್ಲಿ ಬುಕ್ ಮಾಡಿ ಅಥವಾ ಟಿಕೆಟ್‌ಗಾಗಿ 9916863637 ಸಂಪರ್ಕಿಸಿ ಈ ನಾಟಕ ನೋಡಿ, ಸಾಮರಸ್ಯವನ್ನು ಕಲೆತು ಹೋದರು ಎಲ್ಲಾ ಜನಾಂಗೀಯ ಜನರು. ಹಾಗೆಯೇ ಈ ‘ಆಲೇದೇವ್ರು’ ನಾಟಕ ನಾಳೆ ನಿಮ್ಮ ಊರಿಗೂ ಬರುತ್ತಿದೆ, ಹಾಗೆಯೇ ಸಾಮಾನ್ಯ ಎಲ್ಲಾ ಜನರು ಈಗಿರುವ ದೂರವಾಣಿ ಸಂಪರ್ಕವನ್ನು ಸಂಪರ್ಕಿಸಬಹುದು..

ತೊಂಬತ್ತರ ದಶಕದಿಂದೀಚೆಗೆ ಭಾರತದ ಹಳ್ಳಿಗಳು ಹಲವು ಆಯಾಮಗಳಲ್ಲಿ ಬದಲಾವಣೆ ಕಂಡಿವೆ. ಪಕ್ಷ ರಾಜಕಾರಣ ಹಳ್ಳಿಗಳ ಅರ್ಧ ಆತ್ಮವನ್ನು ಕೊಂದಿದ್ದಾರೆ. ಧರ್ಮ ರಾಜಕಾರಣ ಉಳಿದರ್ಧ ಆತ್ಮವನ್ನೂ ಹಿಂಡಿ ಹಿಂಡುತ್ತಾ ಹಿಪ್ಪೆ ಮಾಡುತ್ತಾ ಬಂದಿದೆ. 1992ರ ಡಿಸೆಂಬರ್ ತಿಂಗಳ ನಂತರದಲ್ಲಂತೂ ದೇಶ ಹಿಂದೂ ಮತ್ತು ಮುಸ್ಲಿಮ್ ಎಂಬ ಎರಡು ಬೇರೆ ಬೇರೆ ಹಳಿಗಳ ಮೇಲೆಯೇ ಸಾಗುತ್ತಾ ಬಂದಿದೆ. ಹಾಗೆಂದು ಈ ದೇಶದ ಹಳ್ಳಿಗಳು ಹಿಂದೆಯೇ ಸಮಾನತೆಯನ್ನು ಹಾಸಿ ಹೊದ್ದಿದ್ದವೆಂದೇನೂ ಅಲ್ಲ. ಆದರೂ, ಗ್ರಾಮೀಣ ಭಾರತದ ಈಗಿನ ಸ್ಥಿತಿಯನ್ನು ನೋಡಿದರೆ ಧಾರ್ಮಿಕ ಸಾಮರಸ್ಯ ಎಂಬುದು ಬರಿಯ ಆದರ್ಶದ ನೆಲೆಗಷ್ಟೇ ಉಳಿದುಬಿಡುತ್ತದೆಯೇ ಎಂಬ ಆತಂಕ ಕವಿಯುತ್ತದೆ.

ಹಿಂದೂ ಮುಸ್ಲಿಮ್‌ ರು ಒಂದೆಡೆ ಹೆಚ್ಚಾಗಿರುವ ಯಾವುದೇ ಪ್ರದೇಶಗಳೂ ಚುನಾವಣೆಯ ಸಂದರ್ಭದಲ್ಲಷ್ಟೇ ಅಲ್ಲ, ವರ್ಷದ 365 ದಿನಗಳೂ ‘ಸೂಕ್ಷ್ಮ ಪ್ರದೇಶ’ಗಳಾಗಿ ರೂಪಾಂತರವಾಗಿವೆ, ಮತ್ತೂ ಆಗುತ್ತಿವೆ. ಇಂಥ ವಿಷಮ ಸಂದರ್ಭದಲ್ಲಿ ಮನುಷ್ಯ ಮನುಷ್ಯನನ್ನು ಅರಿತು ಬದುಕಬೇಕೆಂಬ ಸಾಮರಸ್ಯದ ತುರ್ತನ್ನು ನೇರಾನೇರ ಹೇಳುವ ‘ಆಲೈದೇವ್ರು’ (ರಚನೆ: ಹನುಮಂತ ಹಾಲಿಗೇರಿ / ನಿರ್ದೇಶನ: ಸಿದ್ಧರಾಮ ಕೊಪ್ಪರ) ನಾಟಕ ಇತ್ತೀಚೆಗೆ ಬೆಂಗಳೂರಿನ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ಮೊದಲ ಪ್ರಯೋಗ ಕಂಡಿತು.

ಹಳ್ಳಿಗಳಲ್ಲಿ ದರ್ಗಾಕ್ಕೆ ಸಕ್ಕರೆ ಊದಿಸುತ್ತಿದ್ದ, ಊರಮ್ಮನ ಕೊಂಡಕ್ಕೆ ಉಪ್ಪು, ಅರಳು ಚೆಲ್ಲುತ್ತಿದ್ದ, ಪರವು ಮಾಡಲು ಕುರುಜು ಕಟ್ಟುತ್ತಿದ್ದ ಕೈಗಳು, ಆಲೈಹಬ್ಬಕ್ಕೆ ಹೆಜ್ಜೆ ಹಾಕುತ್ತಿದ್ದ ಕಾಲುಗಳು ನಿಧಾನವಾಗಿ ಧರ್ಮದ ಬಣ್ಣ ಬಳಿದುಕೊಳ್ಳತೊಡಗಿವೆ. ಹುಸೇನವ್ವ, ತಾಯಿರಕ್ಕ, ಮೋದ್ಲಣ್ಣ, ತಾತಯ್ಯ, ಬಾಬಣ್ಣ, ಹುಸೇನಪ್ಪ, ಬಾಬು ಪಾಟೀಲ, ಸಾಯಿಬಣ್ಣ ಎಂಬ ಹೆಸರುಗಳು ನಮ್ಮ ನಡುವಿಂದ ದಿನದಿಂದ ದಿನಕ್ಕೆ ಮಾಯವಾಗುತ್ತಿವೆ. ಇದು ಯಾಕೆ ಹೀಗಾಗುತ್ತಿದೆ, ಇದು ಹೀಗೇ ಆಗುತ್ತಾ ಹೋದರೆ ಮುಂದೆ ಬಡಿದಾಡಿಕೊಳ್ಳಲೂ ಜನರು ಉಳಿಯುವುದಿಲ್ಲ ಎಂಬುದನ್ನು ನೇರವಾಗಿ ಹೇಳುವ ಮೂಲಕ ಆಲೈದೇವ್ರು ನಾಟಕ ದೇಶದ ಈ ಹೊತ್ತಿನ ಪ್ರಮುಖ ಸಮಸ್ಯೆಯನ್ನು ದೃಶ್ಯಗಳ ಮೂಲಕ ರಪರಪನೆ ರಾಚುತ್ತಾ ಹೋಗುತ್ತದೆ.

ಮೊಹರಂ ಕುಣಿತ ಕರ್ನಾಟಕದ ಬಹುತೇಕ ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಲ್ಲಿ ಈಗಲೂ ರೂಢಿಯಲ್ಲಿರುವ ಸಾಮರಸ್ಯದ ಆಚರಣೆಯಾಗಿದೆ. ಕರ್ನಾಟಕದಲ್ಲಿ ಸೂಫಿ ಪ್ರಭಾವ ಹೆಚ್ಚಾಗಿರುವ ಪ್ರದೇಶಗಳಲ್ಲೆಲ್ಲ ಮೊಹರಮ್ ಕುಣಿತದ ಆಚರಣೆ ಇಂದಿಗೂ ಇದೆ. ಆದರೆ, ಈ ಆಚರಣೆಗೇ ಕುತ್ತು ತರುವ ಯತ್ನ ನಡೆಸುವ ಮೂಲಕ ಹಿಂದೂ ಮತ್ತು ಮುಸ್ಲಿಮ್ ಎರಡೂ ಧರ್ಮಗಳ ಧಾರ್ಮಿಕ ಮೂಲಭೂತವಾದಿಗಳು ಜನಸಾಮಾನ್ಯರ ನಡುವಿನ ಸಾಮರಸ್ಯ ಕದಡುವ ಸಂಚಿನ ಕಥೆ ಈ ನಾಟಕದ ಎಳೆಯಾಗಿದೆ. ಆದರೆ, ಎಚ್ಚೆತ್ತಿರುವ ಜನರು ಇರುವ ತನಕವೂ ಇಂಥ ಯತ್ನಗಳು ಫಲ ಕೊಡುವುದಿಲ್ಲ ಎಂಬ ಸುಖಾಂತ್ಯದೊಂದಿಗೆ ನಾಟಕ ಮುಗಿಯುತ್ತದೆ.

ನಾಟಕ ಎಲ್ಲೂ ಒಂದು ಧರ್ಮದ ಬಗ್ಗೆ ಮಾತ್ರ ಬೊಟ್ಟು ಮಾಡಿ ತೋರುವುದಿಲ್ಲ. ಇಂದು ಸಾಮರಸ್ಯ ಕದಡುತ್ತಿದೆ ಎಂದರೆ ಅದಕ್ಕೆ ಯಾವ ಯಾವ ಕಾರಣಗಳು ಹಿಂದೆ ಕೆಲಸ ಮಾಡುತ್ತಿವೆ ಎಂಬುದನ್ನು ಸಾಧ್ಯವಿದ್ದಷ್ಟೂ ಮಟ್ಟಿಗೆ ಸ್ಪಷ್ಟಪಡಿಸುವ ಪ್ರಯತ್ನ ನಾಟಕದಲ್ಲಿ ನಡೆದಿದೆ. ಕುಣಿತ, ಹಾಡು, ಪ್ರೇಮ, ಪಿತೂರಿಯ ಅಂಶಗಳನ್ನಿಟ್ಟುಕೊಂಡು ನಾಟಕ ಕಟ್ಟಲಾಗಿದೆ. ಧರ್ಮದ ಹೆಸರಲ್ಲಿ ಮನಸ್ಸುಗಳನ್ನೂ ಕೆಡಿಸಿಕೊಂಡು ಪ್ರಕ್ಷುಬ್ಧ ಸ್ಥಿತಿಯಲ್ಲಿ ಜೀವನ ಸವೆಸುವುದಕ್ಕಿಂತ ಸಾಮರಸ್ಯದ ತಂಪಿನಲ್ಲಿ ಬದುಕು ನಡೆಸುವುದು ಒಳಿತು ಎಂಬ ಸಂದೇಶವನ್ನು ನಾಟಕ ನೇರವಾಗಿ ಹೇಳುತ್ತದೆ. ಹೀಗೆಯೇ ನೇರಾನೇರ ಹೇಳುವ ಮೂಲಕ ನಾಟಕ ತಕ್ಷಣದ ಪರಿಣಾಮವನ್ನಂತೂ ನೋಡುಗರ ಮೇಲೆ ಬೀರುತ್ತದೆ.

ಕಲೆಯ ಮೀಮಾಂಸಾತತ್ವಗಳ ಜೋಕಾಲಿಯಾಡುತ್ತಾ ನಾಟಕವನ್ನು ಹೆಣೆಯುವ ಕ್ರಮಕ್ಕಿಂತ ಹೀಗೆಯೇ ನೋಡುಗರ ಮೇಲೆ ನೇರ ಪರಿಣಾಮ ಬೀರುವ ಕಲೆಯ ತುರ್ತು ಇಂದು ಹೆಚ್ಚಾಗಿದೆ. ಮರಾಠಿಯ ವಿಜಯ್ ತೆಂಡೂಲ್ಕರ್ ರ ‘ಘಾಶೀರಾಮ್ ಕೊತ್ವಾಲ್’ ಅನ್ನು ಮನರಂಜನೆಯೇ ಮುಖ್ಯವಾದ ಸಂಗೀತ ನಾಟಕವೆಂದೇ ಆರಂಭದಲ್ಲಿ ಜನರು ತಿಳಿದಿದ್ದರಂತೆ; ಅದು ರಾಜಕೀಯ ನಾಟಕ ಎಂದು ಜನರಿಗೆ ಅರ್ಥವಾಗುವ ಹೊತ್ತಿಗೆ ಹತ್ತು ಪ್ರದರ್ಶನಗಳು ಆಗಿಹೋಗಿದ್ದವು..! ಜನಸಮೂಹದಲ್ಲಿ ಸಂವೇದನೆ ಇರುವ ಕಾಲಕ್ಕೂ, ಸಂವೇದನೆ ಕಳೆದುಹೋಗುತ್ತಿರುವ ಕಾಲಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಯಾವ ಕಾಲದಲ್ಲಿ ಯಾವ ಹಾಡನ್ನು ಹೇಗೆ ಹಾಡಬೇಕೆಂದು ಕಲಾವಿದನಿಗೆ ಗೊತ್ತಿರಬೇಕು. ಅಂಥ ಕಲಾವಿದ ಮಾತ್ರ ಜನರ ಕಲಾವಿದನಾಗುತ್ತಾನೆ, ಜನರ ಮನಸ್ಸಿನಲ್ಲಿ ಉಳಿಯುತ್ತಾನೆ. ಈ ಸೂಕ್ಷ್ಮ ಗೊತ್ತಿದ್ದೂ ಹಾಡಿದ್ದನ್ನೇ ಹಾಡುವವರು ಆಸ್ಥಾನ ಕಲಾವಿದರು ಮಾತ್ರ.

ರಂಗಪ್ರಯೋಗದ ದೃಷ್ಟಿಯಿಂದ ಹಲವು ಮಿತಿಗಳು ಈ ನಾಟಕದಲ್ಲಿವೆ. ಅವನ್ನೆಲ್ಲಾ ಪಟ್ಟಿ ಮಾಡುತ್ತಾ ಹೋಗುವುದರಲ್ಲಿ ಅರ್ಥವಿಲ್ಲ. ಬೆಳಕು (ಮಂಜು ನಾರಾಯಣ್) ಮತ್ತು ಸಂಗೀತ (ಪ್ರಸನ್ನ ಕುಮಾರ್) ನಾಟಕದ ಈ ಮಿತಿಗಳನ್ನು ನುಂಗಿಹಾಕಿ, ಮಿತಿಗಳನ್ನು ಮರೆಗೆ ಸರಿಸಿವೆ. ತಂತ್ರದ ದೃಷ್ಟಿಯಿಂದಲೂ ನಾಟಕದಲ್ಲಿ ಮಿತಿಗಳಿದ್ದರೂ ಸ್ವಾತಂತ್ರ್ಯದ ದೃಷ್ಟಿಯಿಂದ ನಾಟಕ ಹಲವು ಜಿಗಿತಗಳನ್ನು ಕಂಡಿದೆ. ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯಗಳ ಬಗ್ಗೆ ಮುಕ್ತವಾಗಿ ಮಾತನಾಡಲೂ ಸಾಧ್ಯವಿಲ್ಲದ ಸಂದರ್ಭದಲ್ಲಿ ಸತ್ಯವನ್ನು ನೇರಾನೇರವಾಗಿ ರಾಚುವ ಧೈರ್ಯ ತೆಗೆದುಕೊಂಡ ನಾಟಕ ತಂಡದ ಧೈರ್ಯವನ್ನೂ ಮೆಚ್ಚುವಂಥಾದ್ದೇ ಆಗಿದೆ..!

ಇಂತಹ ಈ ‘ಅಲೈದೇವ್ರು’ ನಾಟಕ ಪ್ರದರ್ಶನಕ್ಕೂ ಬಂದಿತ್ತು ಬೆದರಿಕೆವೂ..!

ಹನುಮಂತ ಹಾಲಗೇರಿ ನಿರ್ದೇಶನದಲ್ಲಿ ವಿಶ್ವ ರಂಗ ಥಿಯೇಟರ್ ಪ್ರಸ್ತುತಪಡಿಸುತ್ತಿರುವ ‘ಆಲೈದೇವ್ರು’ ನಾಟಕಕ್ಕೆ ಕೆಲವು ಹಿಂದೂ ಸಂಘಟನೆಗಳ ಯುವಕರು ‘ಆಲೈದೇವ್ರು’ ನಾಟಕದ ರಂಗಕರ್ಮಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.

ಮೊನ್ನೆ ಭಾನುವಾರ ಸಂಜೆ 4 ಮತ್ತು 7 ಗಂಟೆಗೆ ಬಸವೇಶ್ವರನಗರದಲ್ಲಿರುವ ಪ್ರಭಾತ್ ಕೆಇಬಿ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ಕಾಣುವುದಿತ್ತು. ಈ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಲು ರಂಗಕರ್ಮಿಗಳೂ ನಿರ್ಧರಿಸಿದ್ದರು.

‘ತಂಡದ 40ಕ್ಕೂ ಹೆಚ್ಚು ಸದಸ್ಯರು ಕಳೆದ ಮೂರು ತಿಂಗಳಿನಿಂದ ಅಭ್ಯಾಸ ಮಾಡಿದ್ದರು. ಕಳೆದ ಮೂರು ದಿನಗಳಿಂದ ದೂರವಾಣಿ ಕರೆಗಳ ಮೂಲಕ ಬೆದರಿಕೆ ಹಾಕಿ, ಪದರ್ಶನ ನಡೆಸದಂತೆ ಒತ್ತಡ ಹೇರತ್ತಿದರು ಮೂಲಭೂತವಾದಿಗಳು. ತಂಡಕ್ಕೆ ರಕ್ಷಣೆ ನೀಡುವಂತೆ ಸಂಬಂಧಿಸಿದ ಪೊಲೀಸ್ ಠಾಣೆಗೆ ಮನವಿ ಮಾಡಿಕೊಂಡಿದ್ದರು ನಾಟಕಕಾರರು. ನಾಟಕ ಪ್ರದರ್ಶನದ ಮೂಲಕವೇ ಬೆದರಿಕೆ ಹಾಕಿದವರಿಗೆ ಉತ್ತರಿಸಲು ನಿರ್ಧರಿಸಿದರು ಅವರು ಎಂದು ಹೆಸರು ಹೇಳಲು ಇಚ್ಛಿಸದ ಸಂಘಟಕರೊಬ್ಬರು ತಿಳಿಸಿದರು.

‘ಎಲ್ಲಾ ರಂಗಾಸಕ್ತರೂ ಒಟ್ಟಾಗಿ ನಾಟಕ ಪ್ರದರ್ಶನ ಕಾಣುವಂತೆ ನೋಡಿಕೊಳ್ಳಬೇಕು. ರಂಗಭೂಮಿಯನ್ನು ಇಬ್ಭಾಗ ಮಾಡುವ ಚಿಂತನೆಗಳನ್ನು ಸೋಲಿಸೋಣ’ ಎಂದು ರಂಗಕರ್ಮಿ ಗುಂಡಣ್ಣ ಚಿಕ್ಕಮಗಳೂರು ಅವರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು. ಅಂದಂತೆಯೇ ‘ಆಲೈದೇವ್ರು’ ನಾಟಕ ಯಾವ ಅಡೆಚಣೆಗೂ ಜಗ್ಗದೇ ಯಶಸ್ವಿಯಾಗಿ ನಡೆಯಿತು ಕೂಡ…

ಹಾಗಾದರೆ ಇಂತಹ ‘ಆಲೈದೇವ್ರು’ ಎಂಬ ಸಾಮರಸ್ಯ ಬೆಸೆಯುವ ನಾಟಕ ಕರ್ತೃ ಯಾರೆಂದರೆ ಅದೇ ನಮ್ಮ ಹನುಮಂತ ಹಾಲಿಗೇರಿ ಎಂಬ ಸಾಹಿತಿಯೂ…
ಆತನ ಬಗೆಗೆ ಒಂದಿಷ್ಟು ಮತ್ತೊಮ್ಮೆ ತಿಳಿದುಕೊಳ್ಳೊಣ ಅಲ್ಲವೇ…

ಸಾಹಿತಿ ಹನುಮಂತ ಹಾಲಿಗೇರಿ ಎಂಬ ಅಪ್ಪಟ ಗ್ರಾಮೀಣ ಪ್ರತಿಭೆಯೂ..!

ಹನುಮಂತ ಹಾಲಿಗೇರಿ ಎಂಬ ಗೆಳೆಯನ ಬಗೆಗೆ ಹಿಂದೊಮ್ಮೆ ಬರೆದಿದ್ದೇನು. ಈಗ ಮತ್ತೆ ಅವನ ನಾಟಕವಾದ ‘ಆಲೇದೇವ್ರು’ ಬಗೆಗೆ ಬರೆಯುವಾಗ ಮತ್ತೆ ಮತ್ತೇ ಹನುಮಂತ ಹಾಲಿಗೇರಿಯ ಬಗೆಗೆ ಬರೆಯಬೇಕಾಗಿದೆ. ಕಾರಣವಿಷ್ಟೇ ಈ ‘ಆಲೇದೇವರು’ ಸೂಕ್ಷ್ಮ ಸಂವೇದನೆಯ ಮತ್ತು ಸಹಜ ‘ಮಾನವತೆ’ ಬೆಸೆಯುವ ನಾಟಕವಾಗಿದೆ.

ಹಿಂದೂ ಮತ್ತು ಮುಸ್ಲಿಮ್ ಸಾಮರಸ್ಯವನ್ನು ಬೆಸೆಯುವುದೇ ಈ ನಾಟಕದ ಉದ್ದೇಶವಾಗಿದೆ. ಅಲ್ಲದೇ ಈ ಧರ್ಮಗಳ ಹಗರಣವನ್ನೂ ಬಯಲಿಗೆಳೆಯುವ ಉದ್ದೇಶವನ್ನೂ ಈ ನಾಟಕ ಹೊಂದಿದೆ ಎಂದೇ ನನ್ನ ಭಾವನೆಯಾಗಿದೆ.
ಹಾಗಾದರೆ ಈ ಸಾಹಿತ್ಯಕಾರ ಹನುಮಂತ ಹಾಲಿಗೇರಿ ಯಾರು, ಏನು, ಎತ್ತ ಎಂಬುವದನ್ನು ಒಮ್ಮೆ ನೋಡೋಣ…

ಬಾಗಲಕೋಟೆಯ ಸಮೀಪದ ತುಳಸಿಗೇರಿಯನಾದ ಹನಮಂತ ಹಾಲಿಗೇರಿಯು ಬಸವೇಶ್ವರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರೂ ಅದನ್ನು ಅರ್ಧಕ್ಕೆ ಕೈ ಬಿಟ್ಟು ಅದಕ್ಕೊಂದು ಸೆಲೂಟ್ ಹೊಡೆದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಪದವಿ ಪಡೆದವನು. ಸರ್ವ ಶಿಕ್ಷಣ ಅಭಿಯಾನದ ಟೀಚರ್ ಆಗಿ ಮೂರು ವರ್ಷಗಳ ಕಾಲ ‘ಗ್ರಾಮೀಣ ಗುರುಕುಲ’ ನಡೆಸಿದ ಹನುಮಂತ ಹಾಲಿಗೇರಿಯು, ನಂತರ ‘ಭೈಪ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಅಲ್ಲಿಯೂ ಮೂರು ವರ್ಷ ಕೆಲಸ ಮಾಡಿದವನು.

ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಉದ್ದೇಶದಿಂದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿದ್ದವನು. ಕೆಂಗುಲಾಬಿ ಕಾದಂಬರಿ ಪ್ರಕಟಿಸುವ ಮುನ್ನ ಅವನು ಎಂಟನೇ ತರಗತಿಯಲ್ಲಿದ್ದಾಗಲೇ ‘ರೊಚ್ಚಿಗೆದ್ದ ನಾರಿ’ ಎಂಬ ನಾಟಕ ರಚಿಸಿದ್ದವನು.
ಇವನು ರಚಿಸಿದ ‘ದೇವರ ಹೆಸರಲ್ಲಿ’ ಎಂಬ ಮತ್ತೊಂದು ನಾಟಕವೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಧನ ಪಡೆದಿತ್ತು.

ನಂತರ ವಿಜಯಕರ್ನಾಟಕ, ವಾರ್ತಾಭಾರತಿ, ಸುದ್ದಿ ಟಿ.ವಿ., ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದವನು.

ಹನುಮಂತ ಹಾಲಿಗೇರಿಯ ಕೃತಿಗಳು ಇಂತಿವೆ–

‘ಕೆಂಗುಲಾಬಿ’ ಎಂಬ ಕಾದಂಬರಿ– ಇದು ಚಲನಚಿತ್ರ ಕೂಡ ಆಯಿತು. ‘ಏಪ್ರೀಲ್ ಫೂಲ್’ ಕಥೆಗಳು, ಗೆಂಡೆದೇವ್ರು, ಮಠದ ಹೋರಿ, ಕತ್ತಲಗರ್ಭದ ಮಿಂಚು, ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕಗಳು. ಈ ಊರು ಸುಟ್ಟರೂ ಹನುಮಪ್ಪ ಹೊರಗ ಎಂಬ ನಾಟಕವೂ ಚಲನಚಿತ್ರವೂ ಆಯಿತು, ಅಲ್ಲದೇ ಇವನ ಚಲನಚಿತ್ರಗಳೂ ಪ್ರಶಸ್ತಿಗಳನ್ನೂ ಪಡೆದವು. ಅಂತಹ ಕಥಾ ‘ಮಾನವೀಯತೆ’ಯ ನೆಲೆಯಲ್ಲಿ ಈ ಎಲ್ಲಾ ಕೃತಿಗಳನ್ನು ರಚಿಸಿದವನು ಹನುಮಂತ ಹಾಲಿಗೇರಿ. ಹೀಗಿದೆ ಈ ಹನುಮಂತ ಹಾಲಿಗೇರಿಯ ಸಾಹಿತ್ಯ ರಚನೆಯು.

ಕೆ.ಶಿವು.ಲಕ್ಕಣ್ಣವರ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!