ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಸ್ವಾತಂತ್ರ್ಯ ನಂತರದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕರು, ಶತಾಯಷಿ ಸದಾಶಿವ ಬಾಪುಸಾಹೇಬ ಭೋಸಲೆ ವಿಧಿವಶರಾಗಿದ್ದಾರೆ.
ಕಡೋಲಿ ಗ್ರಾಮದ ಸುಪುತ್ರರಾಗಿದ್ದ ಸದಾಶಿವ ಬಾಪುಸಾಹೇಬ ಭೋಸಲೆ 1947ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿಯ ದಕ್ಷಿಣ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅದಾದ ಬಳಿಕ 1952ರಲ್ಲಿ ಬಾಗೇವಾಡಿ ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಪುನರ್ ಆಯ್ಕೆಯಾಗಿದ್ದರು. ಅಪ್ಪಟ ಗಾಂಧೀಜಿ ಅನುಯಾಯಿ ಆಗಿದ್ದ ಭೋಸಲೆಯವರು 1955ರಲ್ಲಿ ಗಾಂಧೀಜಿ ತತ್ವಗಳಿಗೆ ವಿರುದ್ಧವಾಗಿ ಆಡಳಿತ ನಡೆಯುತ್ತಿದೆ ಎಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಕ್ರಿಯರಾಗಿದ್ದ ಭೋಸಲೆಯವರು 1942ರಲ್ಲಿ ಅರಣ್ಯ ಅಧಿಕಾರಿ ಹುದ್ದೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಳ್ಳಲು ಪುಣೆಗೆ ಹೋದಾಗ ಆ ಹೊತ್ತಿಗೆ ಮಹಾತ್ಮ ಗಾಂಧಿ ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದರು ಮತ್ತು ಸದಾಶಿವ್ ಭೋಸಲೆ ದಾದಾ ಸಂದರ್ಶನಕ್ಕೆ ಹಾಜರಾಗದೆ ಚಳವಳಿಗೆ ಸೇರಿದ್ದರು.
ಆಚಾರ್ಯ ವಿನೋಬಾ ಭಾವೆ ಅವರ ಗ್ರಾಮ ಸ್ವರಾಜ್ ಮತ್ತು ಭೂದಾನ್ ಚಳವಳಿಯನ್ನು ಅಕ್ಷರಶಃ ಪಾಲಿಸಿದ್ದ ಭೋಸಲೆಯವರು ತಮ್ಮ 25 ಏಕರೆ ಭೂಮಿಯಲ್ಲಿ 24 ಏಕರೆಯನ್ನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಬಡ ಜನರಿಗೆ ಹಂಚಿದ್ದು ಅವರ ಸಾಮಾಜಿಕ, ಮಾನವೀಯ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿತ್ತು.
ಇನ್ನು ದೇವಗಿರಿಯಲ್ಲಿ ಎಕರೆ ಭೂಮಿಯಲ್ಲಿ ಗಾಂಧಿ ಘರಾಚಿ ಸ್ಥಾಪಿಸಿದರು. ಅವರು ತಮ್ಮ ಜೀವನದುದ್ದಕ್ಕೂ ಗಾಂಧಿ ತತ್ವವನ್ನು ಪಾಲಿಸುತ್ತಾ ಬಂದಿದ್ದರು. ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಕಡೋಲಿಯ ಕಚೇರಿ ಗಲ್ಲಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಒಬ್ಬ ಮಗ, ಸೊಸೆ, ವಿವಾಹಿತ ಮಗಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.