ಬೆಂಗಳೂರು:- ಒಂದೆಡೆ ಕುಂಭಮೇಳದಲ್ಲಿ ಸ್ನಾನ ಮಾಡಿದ್ರೆ ಬಡತನ ನಿರ್ಮೂಲನೆ ಆಗುತ್ತಾ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇದಕ್ಕೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.
ಆದರೆ ಇದೀಗ ಕಾಂಗ್ರೆಸ್ ಸರ್ಕಾರದಲ್ಲೇ ಮಹಾ ಕುಂಭಮೇಳಕ್ಕೆ ಹೋಗಲು ಶಾಸಕರು ಆಸಕ್ತಿ ತೋರಿದ್ದಾರೆ. ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ಸರ್ಕಾರಿ ಹಣ ಬಳಕೆಗೆ ವಿಧಾನಸಭೆಯ ವಸತಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದೆ. ಅದಕ್ಕಾಗಿ ಇದೇ ಫೆ.23 ರಿಂದ 25ರ ವರೆಗೆ ಶಾಸಕರ ತಂಡ ಪ್ರಯಾಗ್ರಾಜ್ಗೆ ಪ್ರವಾಸ ಹೊರಡಲು ಸಿದ್ಧತೆ ನಡೆಸಿದೆ. ಶಾಸಕರಾದ ಸಿ.ಪಿ ಯೋಗೇಶ್ವರ್, ಹೆಚ್.ಸಿ ಬಾಲಕೃಷ್ಣ, ಬಿ.ನಾಗೇಂದ್ರ, ಬಿ.ಶಿವಣ್ಣ, ಶಿವರಾಮ್ ಹೆಬ್ಬಾರ್ ಭಾಗಿರಥಿ ಮುರುಳ್ಯಾ, ಸಿಮೆಂಟ್ ಮಂಜು, ಡಾಕ್ಟರ್ ಚಂದ್ರು ಲಮಾಣಿ, ಖನಿ ಫಾತಿಮಾ, ಸ್ವರೂಪ್ ಪ್ರಕಾಶ್, ರಾಜು ಕಾಗೆ ಸಮಿತಿಯಲ್ಲಿದ್ದಾರೆ.
ಶಾಸಕರ ಒತ್ತಾಯಕ್ಕೆ ಮಣಿದು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದ ಸಮಿತಿ ಒಪ್ಪಿಗೆ ಸೂಚಿಸಿದೆ. ಬಳಿಕ ವಸತಿ ಸಮಿತಿಯ ಪ್ರಯಾಗರಾಜ್ ಪ್ರವಾಸಕ್ಕೆ ಸ್ಪೀಕರ್ ಅನುಮೋದನೆ ನೀಡಿದ್ದಾರೆ.
ಫೆ.23ರಂದು ಶಾಸಕರ ನಿಯೋಗ ಬೆಂಗಳೂರಿನಿಂದ ತೆರಳಲಿದ್ದು, ಲಕ್ನೋ, ಪ್ರಯಾಗರಾಜ್, ಅಯೋಧ್ಯ, ವಾರಣಾಸಿಯಲ್ಲಿ ಪ್ರಯಾಣ ಬೆಳೆಸಲಿದೆ. ಹಣಕಾಸು ಇಲಾಖೆಯಿಂದಲೂ ಪ್ರವಾಸದ ವೆಚ್ಚಕ್ಕೆ ಸಹಮತ ನೀಡಲಾಗಿದೆ.


