ಪ್ರಯಾಗ್ ರಾಜ್:- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.
ಪುಣ್ಯಸ್ನಾನದ ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ಈ ಮಹಾಕುಂಭಮೇಳ ಇಡೀ ವಿಶ್ವದ ಧರ್ಮಾತೀತ ಆಸ್ತಿಕರನ್ನು ಸೂಜಿಗಲ್ಲಿನಂತೆ ಬರಸೆಳೆದು ಜಾಗತಿಕ ಇತಿಹಾಸ ಬರೆಯುತ್ತಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ್‌ರಾಜ್‌ನ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಮಾಡಿದ ಪುಣ್ಯಸ್ನಾನ ಪುನೀತ ಭಾವ ಮೂಡಿಸಿದೆ ಎಂದು ತಿಳಿಸಿದರು.
ಜಾಗತಿಕ ಶಾಂತಿಗಾಗಿ, ದೇಶದ ಕಲ್ಯಾಣಕ್ಕಾಗಿ, ಕರುನಾಡ ಜನರ ಒಳಿತಿಗಾಗಿ ಪ್ರಾರ್ಥಿಸಿದೆ. ಈ ಕುಂಭಮೇಳದ ಕೊನೆಯ ದಿನದವರೆಗೂ ಅಂದರೆ ಫೆಬ್ರವರಿ 28ರಂದು ಹರಿದು ಬರುವ ಭಕ್ತ ಸಾಗರಕ್ಕೆ ಪುಣ್ಯ ಲಭಿಸಲಿ, ಯಾವುದೇ ಅವಘಡಗಳು ಸಂಭವಿಸದಿರಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ ಹಾಗೂ ಪರಮಪೂಜ್ಯ ಋಷಿ ಮುನಿಗಳ ಆಶೀರ್ವಾದ ನವಚೈತನ್ಯ ಮೂಡಿಸಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.