HomeEducationಕೊರೋನಾ ವ್ಯಾಪಕವಾಗಿದೆ, ಕೆ-ಸೆಟ್ ಮುಂದೂಡಿ; ಪರೀಕ್ಷಾರ್ಥಿಗಳ ಆಗ್ರಹ

ಕೊರೋನಾ ವ್ಯಾಪಕವಾಗಿದೆ, ಕೆ-ಸೆಟ್ ಮುಂದೂಡಿ; ಪರೀಕ್ಷಾರ್ಥಿಗಳ ಆಗ್ರಹ

Spread the love

ಭವಿಷ್ಯ ರೂಪಿಸಿಕೊಳ್ಳಲು ಜೀವ ಪಣಕ್ಕಿಡುವುದು ಸರಿಯೇ?

ವಿಜಯಸಾಕ್ಷಿ ವಿಶೇಷ
ಕೊಪ್ಪಳ: ಏಪ್ರಿಲ್ 11ರಂದು ನಡೆಯಬೇಕಿದ್ದ ಕೆ-ಸೆಟ್ ಪರೀಕ್ಷೆಯನ್ನು ಅನಿವಾರ್ಯ ಎನ್ನುವ ಕಾರಣ ನೀಡಿ ಮುಂದೂಡಲಾಗಿತ್ತು. ಬಹುಶಃ ಪರೀಕ್ಷೆ ಇನ್ನೊಂದೆರಡು ತಿಂಗಳು ಮುಂದಕ್ಕೆ ಎಂದು ಊಹಿಸಿದ್ದ ಪರೀಕ್ಷಾರ್ಥಿಗಳ ಲೆಕ್ಕಾಚಾರ ತಲೆ ಕೆಳಗಾಗಿತ್ತು. ಏಪ್ರಿಲ್ 25ರಂದು ಕೆ-ಸೆಟ್ ಪರೀಕ್ಷೆ ಮರುನಿಗದಿಯಾಗಿದ್ದು, ಇದೀಗ ಆತಂಕ ತಂದೊಡ್ಡಿದೆ.

ಕೆ-ಸೆಟ್ ಪರೀಕ್ಷೆ ಬಗ್ಗೆ ಇರುವ ಆತಂಕ ಅಧ್ಯಯನಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಜೀವಕ್ಕೆ ಸಂಬಂಧಿಸಿದ್ದು. ಈಗಾಗಲೇ ದಿನೇ ದಿನೇ ಕೊರೋನಾ ಪ್ರಕರಣಗಳ ಸಂಖ್ಯೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹೆಚ್ಚುತ್ತಲೇ ಇವೆ. ಆಸ್ಪತ್ರೆ, ಆಕ್ಸಿಜನ್ ಕೊರತೆ ಕುರಿತು ಅಲ್ಲಲ್ಲಿ ವರದಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂಥ ಸಂದರ್ಭದಲ್ಲಿ ಮತ್ತೇ ಪರೀಕ್ಷೆ ನಿಗದಿ ಮಾಡಿರುವುದು ತುಘಲಕ್ ದರ್ಬಾರ್ ನೆನಪಿಸುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಪರೀಕ್ಷಾರ್ಥಿಗಳು ಆಕ್ಷೇಪಿಸಿದ್ದಾರೆ.

ಇಡೀ ರಾಜ್ಯದಲ್ಲಿ 11 ಕೇಂದ್ರಗಳಲ್ಲಿ ಮಾತ್ರ ಕೆ-ಸೆಟ್ ಪರೀಕ್ಷೆಗಳು ನಡೆಯುವುದರಿಂದ ಪರೀಕ್ಷಾರ್ಥಿಗಳಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಒಂದು ಕಡೆ ಕೊರೋನಾ ಕಾಟವಾದರೆ ಮತ್ತೊಂದೆಡೆ ಬಸ್ಗಳ ತೊಂದರೆ. ಹಾಗೊಂದು ವೇಳೆ ಪರೀಕ್ಷೆ ನಿಗದಿಯಾದರೆ ಸಹಸ್ರಾರು ರೂಪಾಯಿ ವ್ಯಯಿಸಿ ಖಾಸಗಿ ವಾಹನಗಳ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬರಬೇಕು.

ಈ ಬಾರಿ ಸುಮಾರು 79 ಸಾವಿರ ಅಭ್ಯರ್ಥಿಗಳು ವಿವಿಧ ವಿಷಯಗಳಲ್ಲಿ ಕೆ-ಸೆಟ್ ಬರೆಯಲಿದ್ದು ಗ್ರಾಮೀಣ ಭಾಗದ ಸುಮಾರು 40 ಸಾವಿರ ಪರೀಕ್ಷಾರ್ಥಿಗಳು ಬಸ್ಗಳಿಲ್ಲದೇ ಖಾಸಗಿ ವಾಹನಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಬರುವ ಅನಿವಾರ್ಯತೆ ಬಂದೊದಗಿದೆ. ಜೊತೆಗೆ ಪರೀಕ್ಷಾ ಕೇಂದ್ರಗಳು ಕೆಲ ಗ್ರಾಮೀಣ ಭಾಗಗಳಿಗೆ ದೂರ ಇರುವುದರಿಂದ ಒಂದು ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರ ಇರುವ ಊರುಗಳಿಗೆ ತಲುಪಬೇಕಿದೆ.
ಊರು ತಲುಪಿದ ಮೇಲೆ ಉಳಿದುಕೊಳ್ಳಲು ವ್ಯವಸ್ಥೆಯ ಖಚಿತತೆ ಇಲ್ಲ. ಏಕೆಂದರೆ ಬೆಂಗಳೂರು ಸೇರಿದಂತೆ ಹಲವೆಡೆ ಹೊಟೇಲ್ಗಳಲ್ಲೂ ಸಹ ಕೊರೋನಾ ರೋಗಿಗಳಿಗಾಗಿ ಬೆಡ್ ಹಾಕಲಾಗಿದೆ. ವಸತಿ ಗೃಹಗಳು ಬುಕ್ ಆಗಿವೆ. ಹೀಗಾದರೆ ಪರೀಕ್ಷಾರ್ಥಿಗಳು ಎಲ್ಲಿ ಉಳಿದುಕೊಳ್ಳಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಕೊರೋನಾ ಬಂದರೆ ಏನು ಗತಿ?

ಕೆ-ಸೆಟ್ ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಭವಿಷ್ಯ ಮುಖ್ಯ ನಿಜ, ಆದರೆ ಜೀವಕ್ಕಿಂತ ದೊಡ್ಡದೇನಿಲ್ಲ. ಬದುಕಿದ್ದರೆ ತಾನೇ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಪರೀಕ್ಷೆಯ ಕಾರಣಕ್ಕಾಗಿ ಬಂದು ಕೊರೋನಾ ಅಂಟಿಕೊಂಡರೆ ಮುಂದೇನು ಗತಿ? ಎಂಬ ಆತಂಕ ಪರೀಕ್ಷಾರ್ಥಿಗಳನ್ನು ಕಾಡತೊಡಗಿದೆ.

ತಡವಾದರೂ ಅಚ್ಚುಕಟ್ಟಾಗಿ ನಡೆಯಲಿ:
ಕಳೆದ ಸಲವೂ ಕೆ-ಸೆಟ್ ಪರೀಕ್ಷೆ ಹೀಗೇ ಆಗಿತ್ತು. ಏಪ್ರಿಲ್ನಲ್ಲಿ ನಡೆಯಬೇಕಿದ್ದ ಪರೀಕ್ಷೆ ಕೊರೋನಾ ಹಾವಳಿ ಒಂದು ಹಂತಕ್ಕೆ ತಹಬದಿಗೆ ಬಂದ ಮೇಲೆ ನಡೆದಿತ್ತು. ಈ ಸಲವೂ ಕಳೆದ ವರ್ಷದಂತೆ ಆಗಲಿ. ಕೆ-ಸೆಟ್ ಕೇಂದ್ರವು ಪರೀಕ್ಷಾರ್ಥಿಗಳ ಬದುಕಿನ ಜೊತೆ ಚೆಲ್ಲಾಟವಾಡದಿರಲಿ. ಏಪ್ರಿಲ್ 25ರ ಬದಲು ಡಿಸೆಂಬರ್ನಲ್ಲೇ ಪರೀಕ್ಷೆ ನಡೆಸುವುದು ಸೂಕ್ತ

ಚೈತ್ರ ಕಲ್ಮಠ, ಪರೀಕ್ಷಾರ್ಥಿ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!