ಮಿಶನ್ ವಿದ್ಯಾಕಾಶಿಗೆ ಪೂರಕವಾಗಿ ಶಾಲೆಗಳಿಗೆ ಜಿಲ್ಲಾಧಿಕಾರಿ ಭೇಟಿ: ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಈ ಬಾರಿ ಧಾರವಾಡ ಜಿಲ್ಲೆಯು ಒಂದಂಕಿ ಸ್ಥಾನ ಪಡೆಯಬೇಕು ಎಂದು ಹಠ ತೊಟ್ಟಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಈಗಾಗಲೇ ಆರಂಭಿಸಿರುವ ಮಿಶನ್ ವಿದ್ಯಾಕಾಶಿಗೆ ಪೂರಕವಾಗಿ ಫೆ.14ರಂದು ತಾಲೂಕಿನ ಉಪ್ಪಿನ ಬೆಟಗೇರಿ, ಯಾದವಾಡ ಹಾಗೂ ಲಕಮಾಪೂರ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

Advertisement

ಯಾದವಾಡ ಸರಕಾರಿ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಮತ್ತು ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜಾಣರಿದ್ದರೂ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಅವರಿಗೆ ಬರೀ ಪಾಠ-ಪ್ರವಚನ ಮಾತ್ರವಲ್ಲದೇ ಆತ್ಮವಿಶ್ವಾಸ ಮೂಡಿಸುವ ಕಲಿಕೆ ಸಹ ಹೇಳಿಕೊಡಬೇಕು ಎಂದರು.

ಪರೀಕ್ಷೆಯಲ್ಲಿ ಯಾವ ಪ್ರಶ್ನೆಗಳಿಗೆ ಎಷ್ಟು ಸಮಯ ನೀಡುವುದು, ಮೌಲ್ಯಮಾಪಕರಿಗೆ ತಿಳಿಯುವಂತೆ ದುಂಡಾಗಿ ಅಕ್ಷರಗಳನ್ನು ಬರೆಯುವುದು, ರೂಢಿ ಪರೀಕ್ಷೆಯ ಅನುಕೂಲ ಸೇರಿದಂತೆ ಹಲವು ಸಲಹೆಗಳನ್ನು ನೀಡಿದರು.

ಇದಕ್ಕೂ ಮುಂಚೆ ಎಸ್‌ಎಸ್‌ಎಲ್‌ಸಿ ಮಕ್ಕಳೊಂದಿಗೆ ಜಿಲ್ಲಾಧಿಕಾರಿಗಳು ನೆಲದಲ್ಲಿ ಕುಳಿತು ಬಿಸಿಯೂಟ ಸವಿದರು. ನಿತ್ಯ ಎಷ್ಟು ಸಮಯಕ್ಕೆ ಏನೆಲ್ಲಾ ಊಟ ಕೊಡುತ್ತಾರೆ ಎಂಬೆಲ್ಲ ವಿಚಾರಗಳ ಬಗ್ಗೆ ಊಟ ಮಾಡುತ್ತಲೇ ವಿದ್ಯಾರ್ಥಿಗಳಿಂದ ತಿಳಿದುಕೊಂಡರು. ತದನಂತರ ಶಾಲೆಯ ಶೌಚಾಲಯ ಸ್ವಚ್ಛತೆ, ಕೊಠಡಿಗಳ ವೀಕ್ಷಣೆ ನಡೆಸಿದರು.

ಇದೇ ಸಂದರ್ಭದಲ್ಲಿ ಯಾದವಾಡ, ಮುಳಮುತ್ತಲ ಹಾಗೂ ಲಕಮಾಪೂರ ಗ್ರಾಮಗಳಿಂದ ಯಾದವಾಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕಲಿಯಲು ಬರುತ್ತಿದ್ದು, ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿಗೆ ಕಾಲೇಜು ಆರಂಭಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಯಾದವಾಡ ಗ್ರಾ.ಪಂ ಪರವಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷೆ ಲಕ್ಷ್ಮೀ ಗಳಗಿ, ಸದಸ್ಯರಾದ ಪಾರ್ವತಿ ಹಿರೇಮಠ, ಮಡಿವಾಳಪ್ಪ ದಿಂಡಲಕೊಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ ದೊಡಮನಿ, ರಾಚಯ್ಯ ಹಳ್ಳಿಗೇರಿಮಠ, ಶೇಖಣ್ಣ ಕುಂಬಾರ, ಈರಪ್ಪ ಮಾನಪ್ಪನವರ, ಸುರೇಶ ತೋಟಗೇರ ಇದ್ದರು.

ಲಕಮಾಪುರ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ

ಲಕಮಾಪುರ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಕ್ಕಳ ಕಲಿಕಾ ಗುಣಮಟ್ಟ ಮತ್ತು ಓದು-ಬರಹದಲ್ಲಿ ಹಿನ್ನಡೆಯಾಗಿರುವ ಮತ್ತು ಅದರ ಸುಧಾರಣೆಗೆ ಅಗತ್ಯ ಅಂಶಗಳ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದರು. ಬರುವ ಜೂನ ತಿಂಗಳಿಂದ ಮಿಶನ್ ವಿದ್ಯಾಕಾಶಿಯಡಿ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡಿ, ಕಾರ್ಯಕ್ರಮಗಳನ್ನು ರೂಪಿಸುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರು ಆರ್.ಎಂ.ಹೊನ್ನಪ್ಪನವರ, ದೈಹಿಕ ಶಿಕ್ಷಕ ಸತೀಶ ವಕ್ಕನವರ ಹಾಗೂ ಇತರ ಶಿಕ್ಷಕ, ಶಿಕ್ಷಕಿಯರು, ಶಾಲಾ ಸುಧಾರಣೆ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here