ಮಂಡ್ಯ:- ಅಣ್ಣನೋರ್ವ ತಮ್ಮನ ಕೊಲೆಗೆ ಸುಪಾರಿ ಕೊಟ್ಟು ಬಳಿಕ ಪಾಪ ಕಳೆಯಲು ಮಹಾ ಕುಂಭಮೇಳಕ್ಕೆ ಹೋಗಿರುವ ಘಟನೆ ಪ್ರಯಾಗ್ ರಾಜ್ ನಲ್ಲಿ ಜರುಗಿದ್ದು, ಇದೀಗ ಈ ಕೀಚಕ ಪೊಲೀಸರ ಅತಿಥಿ ಆಗಿದ್ದಾನೆ.
ಮಂಡ್ಯದ ಎಲ್.ಕೃಷ್ಣೇಗೌಡ ಎಂಬಾತನನ್ನು ಫೆಬ್ರವರಿ 11 ರಂದು ಬೆಳ್ಳಂಬೆಳಗ್ಗೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದರಿಂದ ಇಡೀ ಗ್ರಾಮದ ಜನರೇ ಬೆಚ್ಚಿಬಿದ್ದರು. ಇತ್ತ ಕೃಷ್ಣೇಗೌಡ ಪತ್ನಿ ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಬೆಳಗ್ಗೆ 6 ಗಂಟೆ ವೇಳೆಗೆ ಜಮೀನಿಗೆ ಕೃಷ್ಣೇಗೌಡ ಎಮ್ಮೆ ಕಟ್ಟಿ ಹಾಕಲು ಹೋದಾಗ 6 ಜನರ ಗುಂಪು ಕೃಷ್ಣೇಗೌಡನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಕೆ.ಎಂ ದೊಡ್ಡಿ ಪೊಲೀಸರು ಪ್ರಾಥಮಿಕ ಹಂತದ ಮಾಹಿತಿ ಕಲೆ ಹಾಕಿಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮೊದಲು ಅನುಮಾನ ಬಂದಿದ್ದೆ ಕೊಲೆಯಾದ ಕೃಷ್ಣೇಗೌಡನ ಅಣ್ಣ ಶಿವನಂಜೇಗೌಡ ಉರುಫ್ ಗುಡ್ಡಪ್ಪನ ಮೇಲೆ. ಕೊಲೆಯಾದ ಸಂದರ್ಭದಲ್ಲಿ ಹಾಗೂ ಮೃತ ದೇಹದ ಅಂತ್ಯಸಂಸ್ಕಾರದ ವೇಳೆ ಶಿವನಂಜೇಗೌಡ ಸ್ಥಳದಲ್ಲಿ ಇರಲೇ ಇಲ್ಲ. ಬಳಿಕ ಪೊಲೀಸರು ವಿಚಾರಣೆ ಮಾಡಿದ ವೇಳೆ ಈ ಗುಡ್ಡಪ್ಪ ಪ್ರಯಾಗ್‌ರಾಜ್‌ನ ಕುಂಭಮೇಳಕ್ಕೆ ಹೋಗಿದ್ದ ಎಂದು ತಿಳಿದಿದೆ.
ವಿಚಾರಣೆ ವೇಳೆ ಕೃಷ್ಣೇಗೌಡ ಕೊಲೆಗೆ ಆತನ ಅಣ್ಣನಾದ ಶಿವನಂಜೇಗೌಡ ಉರುಫ್ ಗುಡ್ಡಪ್ಪ ಕಾರಣ ಎಂದು ತಿಳಿದುಬಂದಿದೆ. ಕೂಡಲೇ ಆತನನ್ನು ಪೊಲೀಸರು ಅರೆಸ್ಟ್ ಮಾಡಿ ತನಿಖೆ ಕೈಗೊಂಡಿದ್ದಾರೆ.