ಬೆಂಗಳೂರು: ಕಳೆದ 3 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದ್ ಆಗಿದೆ. 2,000 ರೂಪಾಯಿ ಹಣ ಬಾರದೆ ಇರೋ ಕಾರಣ ಜನರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಇನ್ನೂ ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೇ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಹಾಕುವುದು ಸ್ವಲ್ಪ ತಡವಾಗಿದೆ. ಹೌದು, ಗೃಹಲಕ್ಷ್ಮಿ ಕೂಡ ಮೂರು ತಿಂಗಳಿಂದ ತಡವಾಗಿದೆ. ಸರ್ಕಾರ ಮಾತು ಕೊಟ್ಟಂತೆ ಎರಡು ಹಣ ಹಾಕುತ್ತೇವೆ. ಶೀಘ್ರದಲ್ಲೇ ಎಲ್ಲ ಹಣವನ್ನು ಫಲಾನುಭವಿಗಳಿಗೆ ಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಅನ್ಯಭಾಗ್ಯದಡಿ ಬಿಪಿಎಲ್ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ನೀಡಲಾಗುತ್ತಿದ್ದ ಹಣ 5 ತಿಂಗಳಿನಿಂದ ಸ್ಥಗಿತಗೊಂಡಿದ್ದರೆ ಗೃಹಲಕ್ಷ್ಮಿ ಹಣ 3 ತಿಂಗಳಿನಿಂದ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ಯೋಜನೆ ಆರಂಭದಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ಸರಿಯಾಗಿ ಸ್ಪಂದನೆ ಸಿಗದೇ ಇದ್ದಾಗ ರಾಜ್ಯ ಸರ್ಕಾರ ಅನ್ನಭಾಗ್ಯದ ಹಣ ನೀಡಲಾಗುವುದು ಎಂದು ತಿಳಿಸಿತ್ತು.
ಅದರಂತೆ ಸರ್ಕಾರ ಒಂದು ಕೆಜಿ ಅಕ್ಕಿಗೆ 34 ರೂ. ಪಾವತಿ ಮಾಡಬೇಕಿತ್ತು. ಒಂದು ಪಡಿತರ ಕುಟುಂಬದಲ್ಲಿ ಐವರು ಸದಸ್ಯರಿದ್ದರೆ 20 ಕೆಜಿಗೆ ಅಕ್ಕಿಗೆ ಪ್ರತಿ ತಿಂಗಳು 850 ರೂ. ಜಮೆ ಮಾಡಬೇಕಿತ್ತು. ಆದ್ರೆ ಹಣ ಬಾರದೆ ಇರೋ ಕಾರಣ ಜನರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.