ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಮಾರ್ಚ್ 11ರಿಂದ 14ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
12-3-2025ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ, ಶಿವಾದ್ವೈತ ಸಮ್ಮೇಳನ ಜರುಗಲಿದೆ.
ಪ್ರತಿ ವರುಷ ಶ್ರೀ ಪೀಠದಿಂದ ಕೊಡ ಮಾಡುವ ಪ್ರತಿಷ್ಠಿತ `ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ಯನ್ನು ರಾಯಚೂರ ಜಿಲ್ಲೆ ಕವಿತಾಳ ಗ್ರಾಮದ ಕೃಷಿಯಲ್ಲಿ ವಿಶೇಷ ಸಾಧನೆಗೈದ ಮಹಿಳೆ ಡಾ. ಕವಿತಾ ಮಿಶ್ರಾ ಇವರಿಗೆ ಪ್ರದಾನ ಮಾಡಲಾಗುವುದೆಂದು ತಿಳಿಸಿದ್ದಾರೆ.
ಶ್ರೀ ಪೀಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ವಿವರಗಳನ್ನು ನೀಡಿರುವ ಅವರು, ಮಾರ್ಚ್ 10ರಂದು ಧ್ವಜಾರೋಹಣ ಮತ್ತು ಹರಿದ್ರಾಲೇಪನ ಹಾಗೂ ವೀರಗಾಸೆ-ಪುರವಂತರ ಸಮ್ಮೇಳನ ನಡೆಯುವುದು. ಮಾರ್ಚ್ 11ರಂದು ದೀಪೋತ್ಸವ-ಕುಂಕುಮೋತ್ಸವ, ಶ್ರೀ ವೀರಭದ್ರಸ್ವಾಮಿ ಚಿಕ್ಕ ರಥೋತ್ಸವ ಹಾಗೂ ಕೃಷಿ ಸಮ್ಮೇಳನ, ಕಾಫಿ-ಅಡಿಕೆ ಬೆಳೆಗಾರರ ಹಿತ ಚಿಂತನ-ಮಂಥನ ಸಮಾರಂಭ ಜರುಗುವುದು. ಮಾರ್ಚ್ 13ರಂದು ಶಯನೋತ್ಸವ, ಶ್ರೀ ಜಗದ್ಗುರು ಶಿವಾನಂದ ಎಸ್ಟೇಟಿನಲ್ಲಿ ಪೂಜಾ-ಪ್ರಸಾದ, ಕೆಂಡಾರ್ಚನೆ ಹಾಗೂ ಜಾನಪದ ಸಮ್ಮೇಳನ, ಮಾರ್ಚ್ 14 ಪೌರ್ಣಿಮೆ ದಿನದಂದು ವಸಂತೋತ್ಸವ, ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನೆ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.