ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಜಯ ಸಾಧಿಸಿದೆ.
ಮಹಿಳಾ ಪ್ರೀಮಿಯರ್ ಲೀಗ್ 2025ರ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಗೆಲುವಿನ ಓಟ ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ 202 ರನ್‌ಗಳನ್ನು ಚೇಸ್ ಮಾಡಿ ಗೆದ್ದಿದ್ದ ಸ್ಮೃತಿ ಮಂಧಾನ ಪಡೆ ಸೋಮವಾರ ನಡೆದ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ RCB, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರ್ ಸಿಬಿ ಬಿಗಿ ಬೌಲಿಂಗ್ ಎದುರು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಯಿತು. 19.3 ಓವರ್ ಗಳಲ್ಲಿ 141 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಜೆಮಿಮಾ ರೋಡ್ರಿಗಸ್ 22 ಎಸೆತಗಳಲ್ಲಿ 34 ರನ್ ಗಳಿಸಿ ಡೆಲ್ಲಿ ಪರ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಸಾರಾ ಬ್ರೈಸ್ 24 ರನ್ ಗಳಿಸಿದರೆ, ಅನ್ನಾಬೆಲ್ ಸದರ್ಲ್ಯಾಂಡ್ 19 ರನ್ ಗಳಿಸಿದರು ಆರ್ ಸಿಬಿ ಬೌಲಿಂಗ್ ದಾಳಿಯ ಮುಂದೆ ಯಾವ ಡೆಲ್ಲಿ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆರ್ ಸಿಬಿ ವೇಗಿ ರೇಣುಕಾಸಿಂಗ್ ಠಾಕೂರ್ 4 ಓವರ್ ಗಳಲ್ಲಿ 23 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಜಾರ್ಜಿಯಾ ವೇರಂ 4 ಓವರ್ ಗಳಲ್ಲಿ 25 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಕಿಮ್ ಗಾರ್ಥ್ ಮತ್ತು ಏಕ್ಯಾ ಬಿಷ್ತ್ ತಲಾ ಎರಡು ವಿಕೆಟ್ ಪಡೆದರು.
142 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕಿ ಸ್ಮೃತಿ ಮಂಧಾನ ಮತ್ತು ಡೇನಿಯಲ್ ವ್ಯಾಟ್ ಹಾಡ್ಜ್ ಮೊದಲ ಓವರ್ ನಿಂದಲೇ ಅಬ್ಬರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 10.5 ಓವರ್ ಗಳಲ್ಲಿ 107 ರನ್ ಕಲೆ ಹಾಕಿ ಆರ್ ಸಿಬಿ ಗೆಲುವನ್ನು ಖಚಿತಪಡಿಸಿದರು.
ಡೇನಿಯಲ್ ವ್ಯಾಟ್ ಹಾಡ್ಜ್ 33 ಎಸೆತಗಳಲ್ಲಿ 7 ಬೌಂಡರಿ ಸಿಹಿತ 42 ರನ್ ಗಳಿಸಿ ಔಟಾದರು. ನಾಯಕಿಯ ಆಟವಾಡಿದ ಸ್ಮೃತಿ ಮಂಧಾನ 47 ಎಸೆತಗಳಲ್ಲಿ 10 ಬೌಂಡರಿ 3 ಭರ್ಜರಿ ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಇದು ಸ್ಮೃತಿ ಮಂಧಾನ ಅವರ ಅಧಿಕ ವೈಯಕ್ತಿಕ ಸ್ಕೋರ್ ಆಗಿದೆ.
16.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದ ಆರ್ ಸಿಬಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.