ಬೆಂಗಳೂರು: ಸರ್ಕಾರ ನಡೆಸುವವರೇ ಆನ್‍ಲೈನ್ ಬೆಟ್ಟಿಂಗ್ ದಂಧೆಯಲ್ಲಿ ಪಾಲುದಾರರು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಟ್ಟಿಂಗ್ ದಂಧೆಯಲ್ಲಿ ಇವತ್ತು 3 ಜನರ ಪ್ರಾಣತ್ಯಾಗ ಆಗಿದೆ.
ಆನ್‍ಲೈನ್ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ರಾಜ್ಯದಲ್ಲಿ ನಡೆಯುತ್ತಿದೆ. ಅದಲ್ಲದೆ ಇದರ ಕಡೆ ಗಮನ ಹರಿಸಲು ಸರಕಾರಕ್ಕೆ ಸಮಯವೇ ಇಲ್ಲ, ಸರಕಾರ ನಡೆಸುವವರೇ ಈ ದಂಧೆಯಲ್ಲಿ ಪಾಲುದಾರರು ಎಂದು ಬಹಳ ಜನರು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಇನ್ನೂ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲ್ಲೂಕಿನಲ್ಲಿ ಅಲೆಮಾರಿ ಸಮುದಾಯದ ಇಬ್ಬರು ಹೆಣ್ಮಕ್ಕಳು ಅಸುನೀಗಿದ್ದಾರೆ. ಅದು ಕೊಲೆ ಎಂದು ಆಪಾದನೆಗಳಿವೆ. ನಾನು ಎಸ್ಪಿಯವರಿಗೂ ಮಾತನಾಡಿದ್ದೇನೆ. ಇದರ ಸಮಗ್ರ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದರು. ಈ ಸರಕಾರವು ಜನರ ಪ್ರಾಣ, ಮಾನದ ವಿಚಾರದಲ್ಲಿ ಒಂದು ರೀತಿಯ ಆಟ ಆಡುತ್ತಿದೆ ಎಂದು ಟೀಕಿಸಿದರು.