ನಮ್ಮ ಒಗ್ಗಟ್ಟನ್ನು ಒಡೆಯುವುದು ಸುಲಭವಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಏಕತೆ, ಸಹೋದರತೆ ನಮ್ಮ ಭಾರತ ದೇಶದ ಭವ್ಯ ಸಂಸ್ಕೃತಿಯಾಗಿದ್ದು, ದೇಶ ಬಹು ಭಾಷೆಗಳ, ಬಹು ಜನಾಂಗದ, ಅನೇಕ ಸಂಸ್ಕೃತಿಗಳನ್ನು ಹೊಂದಿದ ಪುಣ್ಯ ಭೂಮಿಯಾಗಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.

Advertisement

ಅವರು ಆಝಾದ ಯುವಕ ಸಂಘ ಹಾಗೂ ತಲಾಬಕಟ್ಟಾ ಮಕಾನ ಕಮಿಟಿ ಆಶ್ರಯದಲ್ಲಿ ಹಜರತ್ ಮುಹಮ್ಮದ ಪೈಗಂಬರರ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತ ದೇಶ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಇತಿಹಾಸದುದ್ದಕ್ಕೂ ಇಲ್ಲಿನ ಜನರು ಸಹಬಾಳ್ವೆಗೆ ಹೆಸರಾಗಿದ್ದಾರೆ. ಹೀಗಾಗಿ ಇಲ್ಲಿನ ಜನರ ಒಗ್ಗಟ್ಟನ್ನು ಒಡೆಯುವುದು ಸುಲಭವಲ್ಲ. ಮುಖ್ಯವಾಗಿ ಎಲ್ಲ ಧರ್ಮಗಳೂ ಮಾನವನ ಒಳಿತನ್ನು ಬಯಸಿವೆಯೇ ಹೊರತು ಕೇಡನ್ನಲ್ಲ ಎಂಬುದನ್ನು ಇಂದಿನ ಪೀಳಿಗೆ ಅರಿಯಬೇಕಿದೆ ಎಂದರು.

ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ನಮ್ಮ ದೇಶದ ನೆಲವು ಸಂತರು, ಸೂಫಿಗಳು ಸಂಚಾರ ಮಾಡಿರುವ ಪುಣ್ಯಭೂಮಿಯಾಗಿದೆ. ಇಲ್ಲಿ ಸರ್ವಧರ್ಮದವರೂ ಸಮನ್ವಯತೆಯಿಂದ ಬಾಳುತ್ತಿದ್ದೇವೆ. ರೋಣ ನಗರದಲ್ಲಿ 25 ವರ್ಷಗಳಿಂದ ಸರ್ವಧರ್ಮದವರ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿರುವುದು ಹಮ್ಮೆಯ ಸಂಗತಿಯಾಗಿದ್ದು, ರೋಣ ನಗರದ ಸಮಸ್ತ ಜನತೆಯ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.

ಹಜರತ ಸೈಯ್ಯದ ನಿಜಾಮುದ್ದೀನ್ ಷಾ ಅರ್ಷಪಿ ಅವರು ಮಾತನಾಡಿ, ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನೀವು ತಾಯಿ ಪಾದದಲ್ಲಿ ಸ್ವರ್ಗ, ತಂದೆ ಅದರ ಬಾಗಿಲು ಎನ್ನುವುದನ್ನು ಮರೆಯಬೇಡಿ. ತಂದೆ-ತಾಯಿಗಳನ್ನು ಪ್ರೀತಿಯಿಂದ ಕಂಡಾಗ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.

ಶಫೀಕ ಮೂಗನೂರ ಪ್ರಾಸ್ತವಿಕವಾಗಿ ಮಾತನಾಡಿದರು. ಸಾನ್ನಿಧ್ಯವನ್ನು ಮಣಕವಾಡ ಶ್ರೀಮಠದ ಅಭಿನವ ಮೃತ್ಯುಂಜಯ ಶ್ರೀಗಳು, ನೇತೃತ್ವವನ್ನು ಹಜರತ ಸುಲೇಮಾನ ಶ್ಯಾವಲಿ ಅಜ್ಜನವರು, ಹಜರತ ಸೈಯದ ನಿಜಾಮುದ್ದೀನ್ ಷಾ ಆರ್ಷಫಿ ಅಜ್ಜನವರು ವಹಿಸಿದ್ದರು.

ಕಬೀರ ಗ್ರೂಪ್ ಅಧ್ಯಕ್ಷ ಎಸ್.ಎ. ಕಬೀರ, ಪುರಸಭೆ ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಸಂಗನಗೌಡ ಪಾಟೀಲ, ಆನಂದ ಗಡ್ಡದೇವರಮಠ, ಬಾವಾಸಾಬ ಬೆಟಗೇರಿ, ವಿ.ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ಮಹಾದೇವಗೌಡ ಲಿಂಗನಗೌಡ್ರ, ಸಂಜಯ ರೆಡ್ಡೆರ, ಮೌನೇಶ ಹಾದಿಮನಿ, ಸಂಜಯ ದೊಡ್ಡಮನಿ ಸೇರಿದಂತೆ ಪುರಸಭೆಯ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

ಹೆಣ್ಣು ಹೆಂಡತಿಯಾಗಿ, ಗಂಡು ಗಂಡನಾಗಿ ಜೀವನ ನಡೆಸುವುದೇ ದಾಂಪತ್ಯ. ಹೀಗಾಗಿ ನೂತನ ವಧು-ವರರು ಸಮಾಜಮುಖಿ ಬದುಕನ್ನ ಕಟ್ಟಿಕೊಂಡು ಸುಂದರ ಜೀವನ ನಡೆಸಬೇಕು.

– ಅಭಿನವ ಮೃತ್ಯುಂಜಯ ಶ್ರೀಗಳು.


Spread the love

LEAVE A REPLY

Please enter your comment!
Please enter your name here