ಯಶಸ್ಸಿಗೆ ಶಿಸ್ತು, ಸಮಯ ಪ್ರಜ್ಞೆ ಮುಖ್ಯ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಿಸ್ತು ಮತ್ತು ಸಮಯ ಪ್ರಜ್ಞೆಯೊಂದಿಗೆ ನಿರಂತರವಾಗಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಯಶಸ್ಸು ಖಂಡಿತವಾಗಿ ದೊರೆಯುತ್ತದೆ ಎಂದು ಡಾ. ಜಿ.ಕೆ. ಕಾಳೆ ಹೇಳಿದರು.

Advertisement

ಅವರು ಪಟ್ಟಣದ ಎಸ್‌ಎವ್ಹಿವ್ಹಿಪಿ ಸಮಿತಿಯ ಬಸವೇಶ್ವರ ಸಿ.ಬಿ.ಎಸ್.ಇ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಉತ್ತಮ ದೇಶ ಹಾಗೂ ಸಮಾಜ ಕಟ್ಟಬೇಕಾದರೆ ಶಿಸ್ತು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಶಿಸ್ತಿನೊಂದಿಗೆ ಚೆನ್ನಾಗಿ ಅಭ್ಯಾಸ ಮಾಡಿ, ಚೆನ್ನಾಗಿ ಬರೆದು ಪರೀಕ್ಷೆಯಲ್ಲಿ ಯಶಸ್ಸಿನ ಕೊನೆಯ ಹಂತ ಮುಟ್ಟಬೇಕು. ಪರೀಕ್ಷೆಯಲ್ಲಿ ಅಗ್ರ ಶ್ರೇಯಾಂಕ ಪಡೆದರೆ ನೀವು ಓದಿದ ಶಾಲೆ, ಕಲಿಸಿದ ಗುರುಗಳು ಹಾಗೂ ಪೋಷಕರಿಗೆ ಗೌರವ ಬರುತ್ತದೆ ಎಂದರು.

ಈ ವೇಳೆ ಡಾ. ಕಾಳೆಯವರು ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಗಳು ಶೇ.96ರಷ್ಟು ಅಂಕ ಗಳಿಸುತ್ತಾರೋ ಅವರಿಗೆ ನಗದು 10 ಸಾವಿರ ರೂಪಾಯಿಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ನೀಡುವುದಾಗಿ ಘೋಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಚೇರಮನ್ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಲೋಕದಲ್ಲಿ ವಿದ್ಯಾರ್ಥಿಗಳು ನಿರಂತರ ಪರಿಶ್ರಮ, ಪ್ರಾಮಾಣಿಕ ಪ್ರಯತ್ನಗಳ ಮೂಲಕ ಎತ್ತರದ ಸ್ಥಾನಗಳನ್ನು ತಲುಪಬೇಕು. ಶ್ರದ್ಧೆಯಿಂದ ಅಧ್ಯಯನ ಮಾಡಿ, ಮುನ್ನುಗ್ಗಿದರೆ ನೀವು ಅಗ್ರ ಶ್ರೇಯಾಂಕದಲ್ಲಿ ತೇರ್ಗಡೆಯಾಗಬಹುದು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಪುಸ್ತಕಗಳ ಒಡನಾಡಿಗಳಾಗಬೇಕು. ಸಮಾಜದಲ್ಲಿನ ಅಂಧಕಾರ-ಅನೀತಿಗಳನ್ನು ದೂರಮಾಡುವ ನಿಟ್ಟಿನಲ್ಲಿ ತಮ್ಮ ಸೇವಾಕಾರ್ಯಗಳನ್ನು ಮಾಡಬೇಕೆಂದರು.

ಇನ್ನೋರ್ವ ಮುಖ್ಯ ಅತಿಥಿ ವಿ.ಬಿ. ಸೋಮನಕಟ್ಟಿಮಠ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ತಂದೆ-ತಾಯಿ, ಗುರುಗಳ ಋಣವನ್ನು ತೀರಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡಬೇಕೆಂದರು.

ಶಾಲೆಯ ಪ್ರಾಚಾರ್ಯ ಬಿ.ಎಚ್. ಬಂಡಿಹಾಳ ಮಾತನಾಡಿದರು. ಎಸ್‌ಎವ್ಹಿವ್ಹಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಸದಾಶಿವ ಕರಡಿ, ಮಲ್ಲಿಕಾರ್ಜುನಪ್ಪ ಮೆಣಸಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ವೈಭವ ಬಂಡಿಹಾಳ ಸ್ವಾಗತಿಸಿದರು. ಪ್ರತೀಕ್ಷಾ ಮ್ಯಾಗೇರಿ, ವರ್ಷಾ ರಡ್ಡೇರ, ಸಂಗೀತಾ ಪೂಜಾರ ನಿರೂಪಿಸಿದರು. ಮನೋಜ ಸರ್ವಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here