ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಮಿಸುವಲ್ಲಿ ಪುರಾಣ-ಪ್ರವಚನಗಳ ಪಾತ್ರ ಬಹಳಷ್ಟು ದೊಡ್ಡದಿದೆ. ಆದರೆ ಈಗಿನವರು ಪುರಾಣದಲ್ಲೇನಿದೆ ಎಂದು ಮೂಗು ಮುರಿಯುತ್ತಿರುವುದು ವಿಷಾದನೀಯ. ಇವುಗಳನ್ನು ಅಸಡ್ಡೆ ಮಾಡದೆ ನಿತ್ಯವೂ ಬಂದು ಪುರಾಣ ಕೇಳಿದರೆ ಅದರಲ್ಲಿನ ವ್ಯಕ್ತಿಗಳ ವ್ಯಕ್ತಿತ್ವದ ಅರಿವು ನಿಮಗಾಗುತ್ತದೆ. ಇದರಿಂದ ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು ಎಂದು ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಪೀಠಾಧಿಪತಿಗಳಾದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಸಮೀಪದ ನಿಡಗುಂದಿಕೊಪ್ಪದಲ್ಲಿ ಫೆ. 21ರಂದು ನಡೆಯುವ ಶ್ರೀ ಕುಮಾರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಾರಂಭಗೊಂಡ ಶ್ರೀ ಅನ್ನದಾನೇಶ್ವರ ಪುರಾಣ ಪ್ರಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಈ ಸಾರೆಯ ಜಾತ್ರಾ ಮಹೋತ್ಸವವು ವಿಶೇಷತೆಯಿಂದ ಕೂಡಿದೆ. ಶ್ರೀ ಕುಮಾರೇಶ್ವರ ಜಾತ್ರಾ ಮಹೋತ್ಸವವು ಫೆ. 21ರಂದು ಜರುಗುತ್ತಿದ್ದರೆ, ಇದರ ಮುನ್ನಾ ದಿನ ಫೆ. 20ರಂದು ಗಜೇಂದ್ರಗಡ ತಾಲೂಕಿನ ಪ್ರಪ್ರಥಮ ಅಕ್ಷರ ಜಾತ್ರೆ ನಡೆಯುತ್ತಿದೆ. ಇದಕ್ಕೆ ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ನುಡಿ ಜಾತ್ರೆ ನಡೆಸಲು ಶ್ರೀಮಠದ ಎಲ್ಲ ಭಕ್ತರು, ತಾಲೂಕಿನ ಎಲ್ಲ ಕನ್ನಡಾಭಿಮಾನಿಗಳು, ಜಿಲ್ಲಾ ಮತ್ತು ತಾಲೂಕಾ ಕಸಾಪ ಘಟಕಗಳು ಮತ್ತು ಶಾಸಕರು ಎಲ್ಲರೂ ಒಮ್ಮನದಿಂದ ಶ್ರಮಿಸುತ್ತಿದ್ದಾರೆ. ಎರಡೂ ದಿನಗಳ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಎರಡೂ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ಎಂದು ಶ್ರೀಗಳು ಹೇಳಿದರು.
ಶ್ರೀಧರಗಡ್ಡಿಯ ಶ್ರೀ ಮರಿಕೊಟ್ಟೂರು ದೇಶಿಕರು ಲಿಂ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ಜೀವನ ದರ್ಶನ ಪುರಾಣ ಪ್ರವಚನವನ್ನು ಪ್ರಾರಂಭಿಸಿದರು. ಕಳಕಪ್ಪ ಕಮ್ಮಾರ, ಪರಶುರಾಮ ಸುಣಗಾರ, ಮುತ್ತಣ್ಣ ಬಡಿಗೇರ, ಮಲ್ಲಿಕಾರ್ಜುನ ಸರ್ವಿ ಸಂಗೀತ ಸೇವೆ ನೀಡಿದರು.
ಬೆಳಿಗ್ಗೆ ನಡೆದ ಷಟ್‌ಸ್ಥಲ ಧ್ವಜಾರೋಹಣವನ್ನು ಶ್ರೀ ಮರಿಕೊಟ್ಟೂರು ಸ್ವಾಮೀಜಿ ನೆರವೇರಿಸಿದರು. ಈ ಸಂದರ್ಭದಲ್ಲಿ ನಿಡಗುಂದಿಕೊಪ್ಪದ ಗ್ರಾಮಸ್ಥರಲ್ಲದೆ, ಸುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸಿದ್ದರು.