ಶಿವಾಜಿ ಮಹಾರಾಜರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತದಲ್ಲಿ ಸನಾತನ ಧರ್ಮ ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಸೂರ್ಯನಂತೆ ಉದಯಿಸಿದ್ದು ಶಿವಾಜಿ ಮಹಾರಾಜರು. ಕಳೆದ ನಾಲ್ಕು ದಶಕಗಳಿಂದ ಶಿವಾಜಿ ಮಹಾರಾಜರು ಕಣ್ಮರೆಯಾಗಿದ್ದರೂ ಭಾರತೀಯರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಧರ್ಮಕ್ಕಾಗಿ ಹುಟ್ಟಿ ಬಂದ ದಾರ್ಶನಿಕರನ್ನು ಒಂದೊಂದು ಜಾತಿಗೆ ಸಿಮೀತಗೋಳಿಸಿರುವುದು ನೋವಿನ ಸಂಗತಿಯಾಗಿದೆ. ಜಾತಿಗಳ ಹೆಸರಿನಲ್ಲಿ ನಮ್ಮ ಧರ್ಮವನ್ನು ಇಂದು ಮರೆಯುತ್ತಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಶಿವಾಜಿ ಮಹಾರಾಜರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ.ಪೂ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

Advertisement

ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶ್ರೀರಾಮ ಸೇನೆ ಹಾಗೂ ಶಿವರಾಮಕೃಷ್ಣ ಸೇವಾ ಟ್ರಸ್ಟ್, ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿ ಹಮ್ಮಿಕೊಂಡಿದ್ದ 398ನೇ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಾಜಿ ಮಹಾರಾಜರಂತೆ ತ್ಯಾಗ-ಬಲಿದಾನ ಮಾಡಲು ಸಾಧ್ಯವಿಲ್ಲ. ಆದರೆ, ನಮ್ಮ ದುರಾಸೆಯನ್ನು ಬಿಟ್ಟು ಕನಿಷ್ಠ ಅವರ ತತ್ವ ಅಳವಡಿಸಿಕೊಂಡರೆ ನಾವು ಬದಲಾಗಲು ಸಾಧ್ಯ. ನಮ್ಮ ದೇಶದಲ್ಲಿ ಜಾತೀಯತೆ ಹೋಗಲಾಡಿಸದಿದ್ದರೆ ಸಾವಿರ ಶಿವಾಜಿ ಜಯಂತಿ ಆಚರಿಸಿಯೂ ಪ್ರಯೋಜನವಿಲ್ಲ ಎಂದರು.

ಭಾವನಾ ಆರ್.ಗೌಡ ಮಾತನಾಡಿ, ಶಿವಾಜಿ ಮಹಾರಾಜರು ಜನಿಸದಿದ್ದರೆ ಭಾರತ ದೇಶವು ಇಸ್ಲಾಮಿಕ್ ದೇಶವಾಗುತ್ತಿತ್ತು. ಸ್ವಾತಂತ್ರ‍್ಯ ಹೋರಾಟಗಾರರಿಗೂ ಶಿವಾಜಿ ಮಹಾರಾಜರ ತತ್ವ, ಆದರ್ಶಗಳು ಪ್ರೇರಣೆಯಾಗಿದ್ದವು. ಭಾರತದ ಪಕ್ಕದಲ್ಲಿರುವ ಅರಬ್ಬಿ ಸಮುದ್ರ ಅರಬ್ಬರ ಹೆಸರಾಗಿ ಇಂದಿಗೂ ಉಳಿದುಕೊಂಡಿದೆ. ಪರಕೀಯರು ಭಾರತದ ಮನೆ-ಮನೆಗೆ ದಾಳಿ ಮಾಡಿ, ತಾಯಿಯನ್ನು ಮಮ್ಮಿ, ತಂದೆಯನ್ನು ಡ್ಯಾಡಿಯನ್ನಾಗಿ ಪರಿವರ್ತಿಸಿ ಹೊದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಧುನಿಕತೆಯ ಸೊಬಗಿಗೆ ನಮ್ಮ ಸಂಸ್ಕಾರ, ಸೊಬಗು ನಾಶ ಆಗುತ್ತಾ ಹೋಗುತ್ತಿದೆ. ನಮ್ಮ ಪರಂಪರೆಯ ಹಬ್ಬಗಳನ್ನು ಹೆಣ್ಣುಮಕ್ಕಳಿಗೆ ತಿಳಿಸಿಕೊಡಬೇಕು. ಹಬ್ಬ-ಹರಿದಿನಗಳ ವೈಜ್ಞಾನಿಕ ಮಹತ್ವವನ್ನು ತಿಳಿಸುವ ಅವಶ್ಯಕತೆ ಇದೆ. ಅಕ್ಕಮಹಾದೇವಿಯ ತತ್ವ, ಆದರ್ಶಗಳು ಭಾರತೀಯ ಮಹಿಳೆಯರಿಗೆ ಅವಶ್ಯಕತೆ ಇದೆ. ಭಾರತೀಯ ಪರಂಪರೆಯಲ್ಲಿ ತಂದೆ-ತಾಯಿಯ ವಿರುದ್ಧವಾಗಿ ನಡೆದ ಯಾರೂ ಸಾಧನೆ ಮಾಡಲು ಇಂದಿಗೂ ಸಾಧ್ಯವಾಗಿಲ್ಲ ಎಂದು ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಎಸ್.ಪಿ ಮಾತನಾಡಿ, ಭಾರತ ಇಂದು ಭಾರತವಾಗಿ ಉಳಿಯಲು ಪ್ರಮುಖ ಕಾರಣ ಛತ್ರಪತಿ ಶಿವಾಜಿ ಮಹಾರಾಜರಾಗಿದ್ದಾರೆ. ಅಂದು ಅವರ ಜನನ ಆಗದಿದ್ದರೆ ಇಂದು ಭಾರತ ಇಸ್ಲಾಂಮಿಕ್ ರಾಷ್ಟçವಾಗಿರುತ್ತಿತ್ತು. ಭಾರತೀಯರ ಕೊನೆಯ ಉಸಿರು ಇರುವವರೆಗೂ ಶಿವಾಜಿ ಮಹಾರಾಜರನ್ನು ಆರಾಧಿಸುತ್ತಾ, ಅವರ ಶೌರ್ಯ, ಪರಾಕ್ರಮ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ 2025ರ ಶಿವಾಜಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಹೆಬ್ಬಳ್ಳಿ, ಮಹೇಶ್ ರೋಖಡೆ, ನಿಕಟಪೂರ್ವ ಅಧ್ಯಕ್ಷ ಜಗದೀಶ್ ಎಸ್.ಪಿ, ಶ್ರೀಕಾಂತ್ ಖಟವಟೆ, ಕಿಸನ್ ಮೆರವಾಡೆ, ಶ್ರೀರಾಮ ಸೇನೆ ಗದಗ ಜಿಲ್ಲಾಧ್ಯಕ್ಷ ಸೋಮು ಗುಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಭಾರತದಲ್ಲಿದ್ದು, ಇಸ್ಲಾಂ ಮನಸ್ಥಿತಿ ಇರುವವರನ್ನು ನಾವು ವಿರೋಧಿಸುತ್ತೇವೆ. ಭಾರತ್ ಮಾತಾಕೀ ಜೈ ಎನ್ನುವವರನ್ನು ನಾವು ವಿರೋಧಿಸುವುದಿಲ್ಲ. ಆದರೆ, ಭಾರತದ ನೆಲದಲ್ಲಿದ್ದು ಬೇರೆ ದೇಶದ ಬಗ್ಗೆ ಅಭಿಮಾನ ಹೊಂದಿದವರನ್ನು ನಾವು ವಿರೋಧಿಸುತ್ತೇವೆ. ಮಕ್ಕಳಿಗೆ ಮೊದಲು ಧರ್ಮದ ಪಾಠ ಮಾಡಬೇಕಾದ ಅವಶ್ಯಕತೆ ಇದೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿದರೆ ಉತ್ತಮ ನಾಗರಿಕರಾಗಿ ಬದುಕಲು ಸಾಧ್ಯವಾಗುತ್ತದೆ.

– ರಾಜು ಖಾನಪ್ಪನವರ.

ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ.

ಭಾರತ ನೆಲಕ್ಕಾಗಿ ಪ್ರಾಣ ಪಣಕ್ಕಿಟ್ಟ ಶಿವಾಜಿ ಮಹಾರಾಜರ ಜಯಂತಿ ಮಾಡುವುದೇ ಗೌರವದ ಸಂಗತಿ. ಶ್ರೀರಾಮ ಸೇನೆ ಸಂಘಟನೆ ಹಾಗೂ ಶಿವಾಜಿ ಮಹಾರಾಜರ ಅನುಯಾಯಿಗಳಿಂದ ಸತತ 8 ವರ್ಷಗಳಿಂದ ನಗರದಲ್ಲಿ ಅದ್ದೂರಿ ಮೆರವಣಿಗೆ ಮಾಡಿಕೊಂಡು ಬರುತ್ತಿರುವುದು ಗದಗ ಜಿಲ್ಲೆಯ ಹೆಮ್ಮೆಯ ವಿಷಯ. ಹಿಂದೂ ಸಂಘಟನೆಗಳಿಂದ ಹಿಂದೂ ಸಂಸ್ಕೃತಿ ಇಂದು ಉಳಿಯುತ್ತಿದೆ.

– ಅನಿಲ ಅಬ್ಬಿಗೇರಿ.

ಹಿಂದೂ ಮುಖಂಡರು.


Spread the love

LEAVE A REPLY

Please enter your comment!
Please enter your name here