ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ಅಲ್ಲಲ್ಲಿ ಅನ್ನ ಭಾಗ್ಯ ಅಕ್ಕಿ ಕಳ್ಳ ಸಾಗಾಟ ಎಗ್ಗಿಲ್ಲದೇ ನಡೆದಿದೆ. ಗದಗ ನಗರದಲ್ಲಂತೂ ಕಳೆದ ಹಲವು ದಿನಗಳಿಂದ ಅಕ್ಕಿ ದಂಧೆ ನಿರಂತರವಾಗಿ ನಡೆಯುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಮೊನ್ನೆ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಅಶೋಕ ಲೈಲಾಂಡ್ ಮಿನಿ ಗೂಡ್ಸ್ ಲಾರಿಯಲ್ಲಿ ಅನ್ನ ಭಾಗ್ಯ ಅಕ್ಕಿ ಸಾಗಾಟ ಮಾಡುವಾಗ ನಗರ ಠಾಣೆಯ ಪೊಲೀಸರ ದಾಳಿ ನಡೆಸಿ ಅಕ್ಕಿ ವಶಪಡಿಸಿಕೊಂಡಿದ್ದರು.
ಹಾವೇರಿ ಪಾಸಿಂಗ್ ಹೊಂದಿದ್ದ ಕೆಎ-27-ಬಿ 9937 ವಾಹನದಲ್ಲಿ ಸುಮಾರು 94 ಸಾವಿರ ರೂ,. ಮೌಲ್ಯದ 41 ಕ್ವಿಂಟಲ್ ಅಕ್ಕಿ, ಹಾಗೂ ಅಶೋಕ ಲೈಲಾಂಡ್ ಮಿನಿ ಗೂಡ್ಸ್ ಲಾರಿಯನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗೂಡ್ಸ್ ವಾಹನದ ಮಾಲೀಕ ಹಾಗೂ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸರಕಾರದ ವಿವಿಧ ಯೋಜನೆಗಳಲ್ಲಿ ಬಡವರಿಗೆ ಕೊಟ್ಟ ಅನ್ನ ಭಾಗ್ಯ ಅಕ್ಕಿ ಸಾಗಾಟ ಮಾಡೋದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ದಂಧೆ ವ್ಯಾಪಕವಾಗಿ ನಡೆದಿತ್ತು.
ಬಹಿರಂಗವಾಗಿ ನಡೆಯುತ್ತಿದ್ದ ದಂದೆ ಈಗ ಕದ್ದು ಮುಚ್ಚಿ ನಡೆಯುತ್ತಿದೆ. ಬೊಲೆರೋ ಗೂಡ್ಸ್, ಟಂಟಂ, ಟಾಟಾಏಸ್ ವಾಹನಗಳ ಮೂಲಕ ಅಣ್ಣಿಗೇರಿಗೆ ಅಸುಂಡಿ, ಕುರ್ತಕೋಟಿ, ಸೈದಾಪೂರ ಮಾರ್ಗವಾಗಿ, ಮುಳಗುಂದದಿಂದ ಹುಬ್ಬಳ್ಳಿಗೆ, ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿಗೆ, ಹೀಗೆ ವಿವಿಧ ದಾರಿಗಳಲ್ಲಿ ಅಕ್ಕಿ ಸಾಗಾಟ ನಡೆಯುತ್ತಿದೆ ಎನ್ನಲಾಗಿದೆ.
ಈ ಕದ್ದು ಮುಚ್ಚಿ ನಡೆಯುತ್ತಿರುವ ದಂದೆಯನ್ನೇ ಕೆಲವು ಪುಡಾರಿಗಳು, ರೌಡಿ ಶೀಟರ್ಸ್ ಹಣ ಗಳಿಸುವ ಮಾರ್ಗವನ್ನಾಗಿ ರೂಪಿಸಿಕೊಂಡಿದ್ದಾರೆ. ರಾತ್ರೋರಾತ್ರಿ ಕದ್ದು ಮುಚ್ಚಿ ನಡೆಯುವ ಈ ದಂಧೆಯ ಹಿಂದೆ ಬಿದ್ದಿರುವ ಈ ಪುಡಾರಿಗಳು ಅಕ್ಕಿ ಸಾಗಾಟದ ವಾಹನ ಹಿಡಿದು ಹಣಕ್ಕೆ ಬೇಡಿಕೆ ಇಡ್ತಾರೆ. ಅವರು ಕೇಳಿದಷ್ಟು ಹಣ ಕೊಡದಿದ್ದರೆ ತಮ್ಮ ಪರಾಮಾಪ್ತ ಪೊಲೀಸರಿಗೆ ಮಾಹಿತಿ ನೀಡ್ತಾರೆ. ಅದನ್ನೇ ಪರಮಾಪ್ತ ಪೊಲೀಸರು ಇಂತಹ ಲಾರಿ ಹಿಡಿದು ಹಿರಿಯ ಅಧಿಕಾರಿಗಳಿಂದ ಬೆನ್ನು ತಟ್ಟಿಸಿಕೊಳ್ಳೊದು ಸಾಮಾನ್ಯವಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಅನ್ನ ಭಾಗ್ಯದ ಅಕ್ಕಿ ಸಿಕ್ಕಿತ್ತು. ಆದರೆ ಪ್ರಕರಣ ದಾಖಲು ಆಗಲಿಲ್ಲ. ರಾಜೀಪಂಚಾಯಿತಿ ಮೂಲಕ ಅದಕ್ಕೆ ಎಳ್ಳು ನೀರು ಬಿಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಉನ್ನತ ತನಿಖೆ ನಡೆದಾಗ ಮಾತ್ರ ಸತ್ಯಾಂಶ ಹೊರಬೀಳಲಿದೆ.